Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಒಳ ಮೀಸಲಾತಿ ಸಮೀಕ್ಷೆಯಲ್ಲಿ 9 ಲಕ್ಷ ಜನ ಜಾತಿ ನಮೂದಿಸಿಲ್ಲ : ಜ್ಞಾನ ಪ್ರಕಾಶ ಸ್ವಾಮೀಜಿ ಅಸಮಾಧಾನ

Internal reservation

ಮೈಸೂರು : ಒಳ ಮೀಸಲಾತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 9 ಲಕ್ಷ ಮಂದಿ ತಮ್ಮ ಜಾತಿಯನ್ನು ನಮೂದಿಸಿಲ್ಲ. ಇದರಿಂದ ಸಮುದಾಯದ ಆಸ್ತಿ ಬೇರೆಯವರ ಪಾಲಾಗಲಿದೆ ಎಂದು ಗಾಂಧಿನಗರದ ಶ್ರೀ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಅಶೋಕ ವೃತ್ತದಲ್ಲಿರುವ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಆದಿ ಕರ್ನಾಟಕ ಮಹಾಸಂಸ್ಥಾನ ಗುರುಪೀಠದ ಡಾ.ಶ್ರೀ ಜ್ಞಾನ ಸ್ವರೂಪಾನಂದ ಸ್ವಾಮೀಜಿ ಅವರ ಪ್ರಥಮ ವರ್ಷದ ಸನ್ಯಾಸ ದೀಕ್ಷಾ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ನಡೆದ ಸಮಾಜದ ಏಳಿಗೆಗಾಗಿ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಸುಮಾರು 9.60 ಲಕ್ಷ ಮಂದಿ ತಮ್ಮ ಜಾತಿಯನ್ನು ನಮೂದಿಸಿಲ್ಲ ಎಂದರೆ, ಯಾವ ಕಡೆಗೆ ಪರಿಶಿಷ್ಟ ಸಮುದಾಯ ಸಾಗುತ್ತಿದ್ದೆ ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ನಮ್ಮವರೇ ನಮ್ಮ ಸಮಾಜವನ್ನು ಸಮಾಽ ಮಾಡಲು ಹೋರಟಿದ್ದಾರೆಯೇ ಎಂದು ಪ್ರಶ್ನಿಸಿದರು.

ನಮ್ಮ ಸಮುದಾಯಕ್ಕೆ ಇಂದು ಗಂಭಿರವಾದ ಸಮಸ್ಯೆ ಎದುರಾಗಿದೆ. ಸರ್ಕಾರ ಈಗಾಗಲೇ ನಾಗಮೋಹನ ದಾಸ್ ವರದಿಯನ್ನು ಅಂಗೀಕರಿಸಿದೆ. ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ರಾಜ್ಯ ಸುತ್ತಿ ಸೆಮಿನಾರ್ ಮಾಡಿದರೂ ನಮ್ಮ ಜನ ಎಚ್ಚೆತ್ತುಕೊಳ್ಳಲಿಲ್ಲ ಎಂದರು.

ಬೆಂಗಳೂರು ನಗರದಲ್ಲೇ 7 ಲಕ್ಷ ಹಾಗೂ ಗ್ರಾಮೀಣ ಭಾಗದಲ್ಲಿ 2 ಲಕ್ಷ ಜನ ಜಾತಿ ನಮೂದಿಸಿಲ್ಲ. ಇದರಿಂದಾಗಿ ಸಮುದಾಯದ ಆಸ್ತಿ ಅನ್ಯ ಸಮುದಾಯದ ಪಾಲಾಗುವಲ್ಲಿ ಯಾವುದೇ ಸಂಶಯವಿಲ್ಲ. ಸಮಾಜದ ಹಿತವನ್ನು ಕಾಯಬೇಕಾದ ಮುಂಚೂಣಿ ನಾಯಕರು, ಸಮುದಾಯವನ್ನು ರಕ್ಷಿಸಬೇಕಾದವರು ಕೈ ಚೆಲ್ಲಿ ಕುಳಿತರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು 1924 ರಲ್ಲಿ ಬಹಿಷ್ಕೃತ ಹಿತಕಾರಣಿ ಸಭೆಯಲ್ಲಿಯೇ ಶಿಕ್ಷಣ ಪಡೆದುಕೊಳ್ಳಬೇಕು, ಸಂಘಟಿತರಾಗಬೇಕು ಹಾಗೂ ಸಕ್ರಿಯವಾಗಿ ಹೋರಾಟ ಮಾಡಬೇಕೇಂದು ಕರೆ ನೀಡಿದ್ದರು. ಆದರೆ, ಎಲ್ಲಾ ಜಾತಿ-ಸಮುದಾಯಗಳು ಒಗ್ಗಟ್ಟಿನ ಮಂತ್ರ ಜಪಿಸುವಾಗ ನಾವುಗಳು ಯಾವ ಕಡೆಗೆ ಚಲಿಸುತ್ತಿದ್ದೇವೆ ಎಂಬುದರ ಬಗ್ಗೆ ಚಿಂತಿಸಬೇಕಿದೆ. ರಾಜಕೀಯ ಅಸ್ಪಷ್ಟತೆಯಿಂದ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದರು.

ನಾವೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫಲಾನುಭವಿಗಳು. ಬಾಬಾ ಸಾಹೇಬರು ಹೇಳಿರುವಂತಹ ಬುದ್ಧ ಧಮ್ಮ ಹಾಗೂ ಸಂಘಕ್ಕೆ ಶರಣಾಗಲಿಲ್ಲವೆಂದರೆ ನಾವು ಅವರಿಗೆ ಮಾಡಿದ ದ್ರೋಹವಾಗಲಿದೆ. ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಆದಿ ಕರ್ನಾಟಕ ಮಹಾಸಂಸ್ಥಾನ ಗುರುಪೀಠದ ಡಾ.ಶ್ರೀ ಜ್ಞಾನ ಸ್ವರೂಪಾನಂದ ಸ್ವಾಮೀಜಿ, ಮಾಜಿ ಮಹಾಪೌರ ಪುರುಷೋತ್ತಮ್, ಮುಖಂಡ ಮಹಾದೇವ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags:
error: Content is protected !!