ಹುಣಸೂರು: ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ಕಳೆದ ಐದು ದಿನಗಳ ಹಿಂದೆ ಸಂಭವಿಸಿದ್ದ ಗ್ಯಾಸ್ ಸೋರಿಕೆ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಪತಿಗೆ ಚಿಕಿತ್ಸೆ ಮುಂದುವರಿದಿದೆ.
ಶೋಭಾ ಎಂಬುವವರೇ ಮೃತ ಮಹಿಳೆಯಾಗಿದ್ದಾರೆ. ಪತಿ ಕುಮಾರ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇದೇ ಅಕ್ಟೋಬರ್.23ರಂದು ಹುಣಸೂರು ಪಟ್ಟಣದ ತಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಗ್ಯಾಸ್ ಸೋರಿಕೆಯಾಗಿ ದುರಂತ ಸಂಭವಿಸಿತ್ತು.
ಸೋರಿಕೆಯಾದ ಅನಿಲದಿಂದ ಏಕಾಏಕಿ ಬೆಂಕಿ ಆವರಿಸಿತ್ತು. ಪರಿಣಾಮ ಶೋಭಾಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದವು. ಪತ್ನಿಯ ರಕ್ಷಣೆಗೆ ಧಾವಿಸಿದ್ದ ಪತಿ ಕುಮಾರ್‌ಗೂ ಕೂಡ ಗಂಭೀರ ಗಾಯಗಳಾಗಿದ್ದವು.
ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶೋಭಾ ಮೃತಪಟ್ಟಿದ್ದಾರೆ. ಪತಿ ಕುಮಾರ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಈ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





