Mysore
22
clear sky

Social Media

ಬುಧವಾರ, 21 ಜನವರಿ 2026
Light
Dark

ಹುಲಿ ಓಡಾಡುವ ನಕಲಿ(AI) ವಿಡಿಯೋ : ಹರಿಬಿಟ್ಟವರ ಕ್ರಮಕ್ಕೆ ಶಾಸಕ ದರ್ಶನ್‌ ಸೂಚನೆ

ನಂಜನಗೂಡು : ಸಾಮಾಜಿಕ ಜಾಲತಾಣದಲ್ಲಿ ಹುಲಿ ಓಡಾಡಿರುವ ನಕಲಿ ವಿಡಿಯೋಗಳನ್ನು ಹರಿಬಿಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಶಾಸಕ ದರ್ಶನ್ ಧ್ರುವನಾರಾಯಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರಗೂರು ತಾಲ್ಲೂಕಿನ ಬಡಗಲಪುರ ಮತ್ತು ಕೂಡಗಿ ಗ್ರಾಮಗಳಲ್ಲಿ ಹುಲಿ ದಾಳಿಗೆ ಈಗಾಗಲೇ ಮೂವರು ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ನಂಜನಗೂಡು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಹುಲಿ ದಾಳಿಯಿಂದ ಮೂವರು ರೈತರು ಮೃತಪಟ್ಟಿದ್ದು, ನಮ್ಮ ನಂಜನಗೂಡು ತಾಲ್ಲೂಕಿನಲ್ಲಿ ಈ ಘಟನೆಗಳು ನಡೆಯದಂತೆ ಅಧಿಕಾರಿಗಳು ಮುಂಜಾಗ್ರತ ಕ್ರಮ ಕೈಗೊಂಡು ಎಚ್ಚರಿಕೆ ವಹಿಸಬೇಕು. ತಾಲ್ಲೂಕಿನ ಕಾಡಂಚಿನ ಪ್ರದೇಶದ ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಮತ್ತು ಚಿರತೆ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಮುಂದುವರಿದಿದ್ದು, ರೈತರಿಗೆ ಉಂಟಾಗುತ್ತಿರುವ ಹಾನಿಯನ್ನು ತಡೆಗಟ್ಟಲು ತುರ್ತು ಸಭೆ ನಡೆಸಿದ್ದೇವೆ. ಕಾಡಿನಿಂದ ನಾಡಿಗೆ ಬರುತ್ತಿರುವ ಕಾಡುಪ್ರಾಣಿಗಳಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದ್ದು, ಪ್ರತಿ ದಿನ ನನಗೆ ಹುಲಿ ಮತ್ತು ಚಿರತೆ ಬರುತ್ತಿರುವ ಬಗ್ಗೆ ರೈತರು ದೂರವಾಣಿ ಮೂಲಕ ಕರೆ ಮಾಡಿ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟು ಚಿರತೆ ಮತ್ತು ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಸೂಚಿಸಿದರು.

ಇದನ್ನು ಓದಿ: ‘ಕಾಡಿನಿಂದ ಹೊರಬರುತ್ತಿರುವ ಹುಲಿಗಳು- ಹೆದರಿಕೆಯ ಹಿಂದಿನ ಸತ್ಯ

ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಬೇಕು. ಒಂದು ವೇಳೆ ಮತ್ತೆ ತಾಲ್ಲೂಕಿನಲ್ಲಿ ಹುಲಿ ಅಥವಾ ಚಿರತೆ ದಾಳಿ ನಡೆಸಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಲಯ ಅರಣ್ಯ ಅಧಿಕಾರಿ ನಿತಿನ್ ಕುಮಾರ್ ಮಾತನಾಡಿ, ಏಚಗುಂಡ್ಲ ಮತ್ತು ಸಿಂಗಾರಿಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿ ಬಂದಿದೆ ಎಂದು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದೆವು. ಹುಲಿ ಇರುವ ವಿಡಿಯೋವನ್ನು ಪರಿಶೀಲನೆ ಮಾಡಿದಾಗ ಇದು ನಕಲಿ ವಿಡಿಯೋ ಎಂದು ತಿಳಿದು ಬಂದಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ದರ್ಶನ್ ಧ್ರುವ ನಾರಾಯಣ್, ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ವಿಡಿಯೋಗಳನ್ನು ಹರಿಬಿಡುತ್ತಿರುವವರ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಡಿವೈಎಸ್ಪಿ ರಘು, ಮಾಜಿ ತಾಪಂ ಅಧ್ಯಕ್ಷ ನಾಗೇಶ್ ರಾಜ್, ಹೆಡಿಯಾಲ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಸೇರಿದಂತೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

Tags:
error: Content is protected !!