ನಂಜನಗೂಡು : ಒಂದು ಪಕ್ಷವನ್ನು ಕಟ್ಟುವುದು ಮತ್ತು ಬೆಳೆಸುವುದು ಅಷ್ಟೊಂದು ಸುಲಭವಲ್ಲ. ಐವತ್ತು ವರ್ಷ ರಾಜಕೀಯ ಮಾಡಿದರೆ ಮಾತ್ರ ಲೀಡರ್ ಆಗಲು ಸಾಧ್ಯ. ರಾಜಕೀಯದಲ್ಲಿ ಸೋಲು ಅನಿವಾರ್ಯ. ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರ ಶ್ರಮ ಬಹಳ ಮುಖ್ಯವಾಗಿದೆ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.
ನಂಜನಗೂಡು ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲಗಳ ಕಾರ್ಯಕರ್ತರ ಸಂಘಟನಾತ್ಮಕ ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಪಕ್ಷದ ಕಾರ್ಯಕರ್ತರ ಮೇಲೆ ಎಲ್ಲರಿಗೂ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಶಾಸಕರ ಮನೆ ಬಾಗಿಲಿಗೆ ಕೆಲಸಗಳನ್ನು ಕೇಳಲು ಹೋಗುವುದಿಲ್ಲ. ಹಾಲಿ ಶಾಸಕರು ಅಧಿಕಾರಕ್ಕೆ ಬಂದು 2.5 ವರ್ಷಗಳಾಗಿವೆ. ಅನುಕಂಪದ ಆಧಾರದ ಮೇಲೆ ಅಧಿಕಾರ ಹಿಡಿದಿದ್ದಾರೆ. ನಂಜನಗೂಡಿನ ಮಾಜಿ ಶಾಸಕರು ಹೇಳಿದ ಹಾಗೆ ಪ್ರಸ್ತುತ ಶಾಸಕರು ನಡೆದುಕೊಳ್ಳುತ್ತಿದ್ದಾರೆ. ವಾಲ್ಮೀಕಿ ಭವನ ನಿರ್ಮಾಣಕ್ಕೆ ವಿ.ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಬಿಜೆಪಿ ಪಕ್ಷದ ಹಲವು ನಾಯಕರ ಕೊಡುಗೆ ಇದ್ದರೂ ಕೂಡ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪಕ್ಷದ ಮುಖಂಡರನ್ನು ಕಡೆಗಣಿಸಲಾಯಿತು. ಇಂದಿನ ರಾಜಕೀಯ ವಿದ್ಯಮಾನದಲ್ಲಿ ಏನಾದರೂ ಆಗಬಹುದು. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮಾಡಿದ್ದ ಕೆಲಸಗಳಿಗೆ ಮತ್ತೆ ಸುಣ್ಣ ಬಣ್ಣ ಹಚ್ಚಿ ಉದ್ಘಾಟನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳು ಬರುವ ಸಾಧ್ಯತೆ ಇದ್ದು, ಎಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕೆ ಶ್ರಮಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಬಿ.ವೈ ವಿಜಯೇಂದ್ರ ಮುಖ್ಯಮಂತ್ರಿ ಆಗುವಂತೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ಇದನ್ನು ಓದಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ಮುಖ್ಯಾಂಶಗಳು
ಬಳಿಕ ಬಿಜೆಪಿ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ ಮಾತನಾಡಿ, ಕಳೆದ ಬಾರಿ ಅನುಕಂಪದ ಆಧಾರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಸಂಘಟನೆ ಎಂದರೆ ಜವಾಬ್ದಾರಿ. ಇಡೀ ಪ್ರಪಂಚದಲ್ಲಿ ನೂರಾರು ಕೋಟಿ ಸದಸ್ಯರು ಹೊಂದಿರುವ ಏಕೈಕ ಪಕ್ಷ ಬಿಜೆಪಿ. ಬಿಜೆಪಿ ಮುಖಂಡರು ಹೇಳಿದಂತೆ ನಾವು ನಡೆದುಕೊಳ್ಳಬೇಕಾಗಿದೆ. ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಕಾರ್ಯಕರ್ತರು ವೀಕ್ಷಣೆ ಮಾಡಬೇಕು. ಪ್ರಸ್ತುತ ಕಾಂಗ್ರೆಸ್ ಪಕ್ಷ ಒಡೆದ ಮನೆಯಂತಾಗಿದೆ. ಈಗಾಗಲೇ ರಾಜ್ಯದ ಜನರು ಕಾಂಗ್ರೆಸ್ಗೆ ಮತ ಹಾಕದಂತೆ ತೀರ್ಮಾನಿಸಿದ್ದಾರೆ. ಯಾವ ಪಕ್ಷಕ್ಕೆ ಮತ ಹಾಕಬೇಕು ಎಂಬ ಗೊಂದಲದಲ್ಲಿದ್ದು ಅವರನ್ನು ನಮ್ಮ ಪಕ್ಷಕ್ಕೆ ಮತ ಹಾಕುವ ನಿಟ್ಟಿನಲ್ಲಿ ಬದಲಾಯಿಸಬೇಕು ಎಂದರು. ನಗರದಲ್ಲಿ ಪೊಲೀಸ್ ಮತ್ತು ಟ್ರಾಫಿಕ್ ಇಲಾಖೆ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗಿದೆ ಎಂದರು
ಕಾರ್ಯಕ್ರಮದಲ್ಲಿ ಮಾಜಿ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದರಾಜು, ಗ್ರಾಮಾಂತರ ಅಧ್ಯಕ್ಷ ಕೆಂಡಗಣ್ಣಪ್ಪ, ಎಸ್.ಎಂ ಕೆಂಪಣ್ಣ, ಬಿ.ಎಸ್ ಮಹದೇವಪ್ಪ, ಬಾಲಚಂದ್ರು, ಮಹದೇವಸ್ವಾಮಿ, ಶ್ರೀನಿವಾಸ ರೆಡ್ಡಿ, ಸಿದ್ದರಾಜು, ಹೆಮ್ಮರಗಾಲ ಸೋಮಣ್ಣ, ನಂದಿನಿ ಮಹೇಶ್, ಪುಟ್ಟಸ್ವಾಮಿ, ಮಲ್ಲಹಳ್ಳಿ ಸಿದ್ದರಾಜು, ಕಾಳಪ್ಪ, ಬದನವಾಳು ಮಂಜು, ಸೇರಿದಂತೆ ಮಹಾಶಕ್ತಿ ಕೇಂದ್ರ, ಮೋರ್ಚಾ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.





