ಮೈಸೂರು : ನಗರದ ಹೆಬ್ಬಾಳು ಕೆರೆಗೆ ರಾಸಾಯನಿಕ ನೀರು ಸೇರಿರುವ ಕಾರಣ ಲಕ್ಷಾಂತರ ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದ ಹೊರ ವಲಯದಲ್ಲಿರುವ ಹೂಟಗಳ್ಳಿ, ಹೆಬ್ಬಾಳ ಕೈಗಾರಿಕ ಪ್ರದೇಶದಿಂದ ಹೊರ ಬರುವ ರಾಸಾಯನಿಕ ನೀರು ಹೆಬ್ಬಳ ಕೆರೆಗೆ ಬಂದು ಸೇರುತ್ತಿದೆ. ಹೀಗಾಗಿ ಕೆರೆಯ ನೀರು ಕಲುಶಿತವಾಗುತ್ತಿರುವ ಕಾರಣ ಕೆರೆಯಲ್ಲಿರುವ ಜಲಚರಗಳ ಮಾರಣಹೋಮ ನಡೆಯುತ್ತಿದೆ.
ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಸುತ್ತಾ ಮುತ್ತಲ ಬಡಾವಣೆಯ ನೂರಾರು ಸ್ಥಳಿಯ ನಿವಾಸಿಗಳು ಈ ಕೆರೆಯಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ಈ ವೇಳೆ ಸತ್ತಿರುವ ರಾಶಿ ರಾಶಿ ಮೀನುಗಳು ಕಂಡು ಬರುತ್ತಿದ್ದು, ಅದರಿಂದ ಬರುತ್ತಿರುವ ದುರ್ವಾಸನೆಯಿಂದಾಗಿ ಸಾರ್ವಜಿಕರಿಗೆ ವಾಯುವಿಹಾರ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿರ್ಲಕ್ಷೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ : ಸುತ್ತಮುತ್ತಲಿನ ಕೈಗಾರಿಕ ಪ್ರದೇಶಗಳಿಂದ ಹೆಬ್ಬಾಳ ಕೆರೆಗೆ ಹರಿದು ಬರುತ್ತಿರುವ ರಾಸಾಯನಿಕ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಬೀತಿ ಸಾರ್ವಜನಿಕರಲ್ಲಿ ಮೂಡಿದೆ. ಅಲ್ಲದೆ ಇದರಿಂದ ಕೆರೆಯಲ್ಲಿರುವ ಸಾವಿರಾರು ಜಲಚರಗಳ ಮಾರಣಹೋಮಕ್ಕೆ ಕಾರಣವಾಗುತ್ತದೆ ಎಂಬ ಬೀತಿಯೂ ಶುರುವಾಗಿದೆ. ಮುಂದೊಂದು ದಿನ ಕೆರೆ ಸಂಪೂರ್ಣ ಕೊಳಚೆ ನೀರಿನ ಹೊಂಡ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
ರಾಜಕಾಲುವೆಯಿಂದ ಕೊಳಚೆ ನೀರು : ಕೆರೆ ಸುತ್ತಲು ಇರುವ ಕಾರ್ಕಾನೆಗಳಿಂದ ಹೊರ ಬರುವ ರಾಸಾಯನಿಕ ನೀರು, ಹಾಗೂ ಸುತ್ತಲೂ ಇರುವ ಬಡಾವಣೆಗಳ ಯುಜಿಡಿ ನೀರು ರಾಜಕಾಲುವೆ ಮೂಲಕ ಹೆಬ್ಬಾಲ ಕೆರೆಗೆ ಬಂದು ಸೇರುತ್ತಿವೆ. ಈ ಎಲ್ಲಾ ಕಾರಣಗಳಿಂದ ಕೆರೆಯ ನೀರು ಕಲುಶಿತವಾಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ : ಕೆರೆಯಲ್ಲಿ ಲಕ್ಷಾಂತರ ಮೀನುಗಳು ಸತ್ತು ಬಿದ್ದಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಅಧಿಕಾರಿಗಳ ನಿರ್ಲಕ್ಷ್ಯೆಯನ್ನು ಎತ್ತಿ ತೋರಿಸುತ್ತಿದೆ. ಸ್ಥಳಿಯರು ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗದಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.