Mysore
21
overcast clouds
Light
Dark

ಜೋರು ಮಳೆಗೆ ಕೊಚ್ಚಿಹೋದ ಬೆಳೆ

ಹುಣಸೂರು: ತಾಲೂಕಿನ ಹನಗೋಡು ವ್ಯಾಪ್ತಿಯ ವಿವಿದೆಡೆ ಇಂದು(ಮೇ.12) ಸುರಿದ ಜೋರು ಮಳೆಗೆ ಬೆಳೆ ಕೊಚ್ಚಿ ಹೋಗಿದ್ದು, ಕೃಷಿಗಾಗಿ ಅಳವಡಿಸಿದ್ದ ತುಂತುರು ನೀರಾವರಿಯ ಪರಿಕರಗಳು ಹಾನಿಗೊಳಗಾಗಿವೆ.

ಸಂಜೆ 6 ರ ವೇಳೆಗೆ ಆರಂಭವಾದ ಭಾರಿ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದು ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಇಡೀ ಜಮೀನಿನಲ್ಲಿ ಕೆರೆಕಟ್ಟೆಗಳು ಸೃಷ್ಟಿಮಾಡಿತ್ತು. ಹನಗೋಡು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲೂ ಸಾಕಷ್ಟು ಮಳೆ ಬಿದ್ದು, ಕೆರೆ ಕಟ್ಟೆಗಳು ಭರ್ತಿಯಾಗಿದೆ. ಮುತ್ತುರಾಯನ ಹೊಸಳ್ಳಿ, ಕಲ್ಲಹಳ್ಳಿ, ಆಡಿಗನಹಳ್ಳಿ, ಹರೀನಹಳ್ಳಿ, ಕರ್ಣಕುಪ್ಪೆ, ಕಣಗಾಲು, ಮದ್ಲಿಮನುಗನಹಳ್ಳಿಯ ಸುತ್ತ ಮುತ್ತ ಧಾರಕಾರ ಮಳೆ ಸುರಿದಿದೆ.

ನೂರಾರು ಮಂದಿ ತಂಬಾಕು ಸಸಿ ನಾಟಿ ಮಾಡಿ ಗೊಬ್ಬರ ಹಾಕಿದ್ದರು. ಒಂದೇ ಮಳೆಗೆ ಜಮೀನುಗಳಲ್ಲಿ ಕೆರೆ ಸೃಷ್ಟಿಸಿದ ಮಳೆಯು ನೂರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ತಂಬಾಕು ಸಸಿಯನ್ನು ಮಣ್ಣಿನ ಸಹಿತ ಹೊತ್ತೊಯ್ದಿದೆ. ಅಲ್ಲದೆ ಅಲ್ಲಲ್ಲಿ ಶುಂಠಿ ಬೆಳೆಗೂ ಹಾನಿ ಮಾಡಿದೆ.

ಮುತ್ತುರಾಯನ ಹೊಸಹಳ್ಳಿಯ ರಾಜೇಗೌಡ, ಸಣ್ಣೇಗೌಡ, ರಾಮಚಂದ್ರ, ಬೋರೇಗೌಡ, ಅಶೋಕ, ಲೋಹಿತ್‌ಗೌಡ, ರಾಜಶೇಖರ್, ಶಿವರಾಜೇಗೌಡ, ಅಣ್ಣಾಜಿಗೌಡ ಸೇರಿದಂತೆ ಇತರೆ ರೈತರ ತಂಬಾಕು, ಶುಂಠಿ ಬೆಳೆಯನ್ನು ಗೊಬ್ಬರ ಸಹಿತ ಕೊಚ್ಚಿ ಹಾಕಿದ್ದು, ಲಕ್ಷಾಂತರ ರೂ ನಷ್ಟ ಉಂಟಾಗಿದೆ.

ಕಲ್ಲಹಳ್ಳಿಯ ಬೈಕಟ್ಟೆ, ದೊಡ್ಡಕೆರೆ, ಆಡಿಗನಹಳ್ಳಿಕೆರೆ, ತಾಳೆ ಮಂಡಿಕಟ್ಟೆ, ಹುಣಸೇಗಾಲದ ಕೆರೆ, ಹರೀನಹಳ್ಳಿ, ಕರ್ಣಕುಪ್ಪೆ, ವದ್ಲಿಮನುಗನಹಳ್ಳಿ ಸೇರಿದಂತೆ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿವೆ. ದೊಡ್ಡ ಕೆರೆಗಳಿಗೂ ಸಾಕಷ್ಟು ನೀರು ಹರಿದು ಬಂದಿದೆ. ಮುತ್ತುರಾಯನಹೊಸಹಳ್ಳಿಯ ಸೀತಮ್ಮಮಾದಯ್ಯರ ತೋಟದಲ್ಲಿ ನಿರ್ಮಿಸಿದ್ದ ಕೃಷಿ ಹೊಂಡಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದು ಕಟ್ಟೆಯನ್ನೇ ಒಡೆದು ಹಾಕಿದೆ. ಅಲ್ಲದೆ ತೆಂಗು, ಅಡಿಕೆ ಸಸಿಗಳಿಗೆ ಇತ್ತೀಚೆಗೆ ಹಾಕಿದ್ದ ಟನ್‌ಗಟ್ಟಲೆ ಕೋಳಿ ಗೊಬ್ಬರ, ಕೊಟ್ಟಿಗೆ ಗೊಬ್ಬರವನ್ನೆಲ್ಲಾ ಮಳೆ ನೀರು ಹೊತ್ತೊಯ್ದು ಅಪಾರ ಪ್ರಮಾಣ ನಷ್ಟ ಉಂಟುಮಾಡಿದೆ.