Mysore
22
overcast clouds
Light
Dark

ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿಗೆ ಕೇಂದ್ರದ ಪ್ರಯತ್ನ : ಸಿಎಂ ಸಿದ್ದರಾಮಯ್ಯ ವಿರೋಧ

ಮೈಸೂರು: ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರದ ಕ್ರಮವನ್ನು, ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಗುರುವಾರ(ಆ.8) ಮೈಸೂರಿನ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ತಿದ್ದುಪಡಿ ಬಿಲ್ ತರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಜೆಪಿ ಹಾಗೂ ಎನ್ ಡಿ ಎ ಯವರಿಗೆ ಅಲ್ಪಸಂಖ್ಯಾತರ ಮೇಲೆ ಕೋಪವಿರುವಂತಿದೆ. ಬಿಜೆಪಿಯವರು ಎಂದಿಗೂ ಜಾತ್ಯಾತೀತತೆ, ಸಾಮಾಜಿಕ ನ್ಯಾಯದ ಪರವಾಗಿ ನಿಂತವರಲ್ಲ. ಬಿಜೆಪಿ ಮೊದಲಿನಿಂದಲೂ ಕೋಮುವಾದಿ ಪಕ್ಷವಾಗಿಯೇ ಗುರುತಿಸಿಕೊಂಡಿದ್ದು, ಜಾತ್ಯಾತೀತ ತತ್ವವನ್ನು ನಂಬುವುದಿಲ್ಲ. ಮತಾಂತರ ನಿಷೇಧ ಕಾನೂನು, ಗೋಹತ್ಯೆ ತಿದ್ದುಪಡಿಗಳನ್ನು ಜಾರಿಗೆ ತಂದ ಬಿಜೆಪಿಯವರು ಇಂದು ವಕ್ಫ ಬೋರ್ಡ್ ತಿದ್ದುಪಡಿ ಪ್ರಯತ್ನಕ್ಕೂ ಕೈಹಾಕಿದ್ದಾರೆ ಎಂದು ಕಿಡಿಕಾರಿದರು.

ವಕ್ಫ್ ಬೋರ್ಡ್ ಕಾನೂನು ಆ ಸಮುದಾಯದ ವೈಯಕ್ತಿಕ ಕಾನೂನಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವುದು ಸಂವಿಧಾನ ಬಾಹಿರ. ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟ, ಕೇಂದ್ರದ ಈ ನಿಲುವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದರು.

ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಆರ್ ಟಿ ಐ ಕಾರ್ಯಕರ್ತರು ಮುಖ್ಯಮಂತ್ರಿಗಳ ವಿರುದ್ದ ದೂರು ದಾಖಲಿಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಸುಳ್ಳು ಕೇಸುಗಳನ್ನು ದಾಖಲಿಸಿದರೆ, ಅವು ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ ಎಂದರು.