ಮೈಸೂರು : ಲಂಡನ್‌ನ ಬಂಕಿಂಗ್ ಹ್ಯಾಮ್ ಅರಮನೆಯಲ್ಲಿ ಎಲ್ಲರಿಗೂ ಪ್ರವೇಶ ಇಲ್ಲ. ದಿನಕ್ಕೆ ಇಂತಿಷ್ಟೇ ಜನ ಭೇಟಿ ನೀಡಬೇಕು ಎಂಬ ನಿಯಮವಿದೆ. ಈ ನಿಯಮ ಮೈಸೂರು ಅರಮನೆ ವೀಕ್ಷಣೆಗೂ ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅರಮನೆ ಉಳಿಯುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಯಮಾರ್ತಾಂಡ ದ್ವಾರದ ಬಳಿ ಬಲೂನ್‌ಗೆ ತುಂಬಿಸುವ ಹೀಲಿಯಂ ಸಿಲಿಂಡರ್ ಸಿಡಿದು ಮೂವರು ಸಾವನ್ನಪ್ಪಿದ್ದಾರೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮೈಸೂರು ಅರಮನೆ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಇದೊಂದು ಪಾರಂಪರಿಕ ಕಟ್ಟಡ. ಇಂತಹ ಅರಮನೆಯನ್ನು ಮತ್ತೆ ಕಟ್ಟಲು ಸಾಧ್ಯವಿಲ್ಲ, ಇದರ ಅರಿವು ಜಿಲ್ಲಾಡಳಿತಕ್ಕಾಗಲಿ ಸಂಬಂಧಪಟ್ಟ ಮಂತ್ರಿಗಳಿಗಾಗಲಿ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಇದನ್ನು ಓದಿ: ಬೆಂಗಳೂರಿನಲ್ಲಿ 55 ಕೋಟಿ ಮೌಲ್ಯದ ಡ್ರಗ್ಸ್ ವಶ: ಗೃಹ ಸಚಿವ ಪರಮೇಶ್ವರ್ ಹೇಳಿದ್ದಿಷ್ಟು.!
ಘಟನೆ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮರಾ ಇದೆ. ಆದರೆ ಅದು ಕೆಟ್ಟು ನಿಂತಿದೆ ಎಂಬ ಮಾಹಿತಿ ಇದೆ. ಕಡಿಮೆ ಹಣದಲ್ಲಿ ಸಿಸಿ ಟಿವಿ ಹಾಕಿದ್ದಾರೆ. ಹೀಗಾದಲ್ಲಿ ನಡೆದ ಘಟನೆಯ ವಾಸ್ತವ ತಿಳಿಯುವುದು ಹೇಗೆ ಎಂದು ಪ್ರಶ್ನಿಸಿದರು.
ಮೈಸೂರು ಪಾರಂಪರಿಕ ಕಟ್ಟಡಗಳ ನಗರ. ಆದರೆ, ನಗರದಲ್ಲಿರುವ ಜಿಲ್ಲಾಧಿಕಾರಿ ಹಳೆ ಕಚೇರಿಯಲ್ಲಿ ಇಂದು ನಾಯಿ, ನರಿಗಳು ಮಲಗುತ್ತಿವೆ. ಅಗ್ನಿಶಾಮಕ ದಳದ ದ್ವಾರ ಬಿದ್ದು ವರ್ಷಗಳೇ ಕಳೆದರೂ ಕ್ರಮ ಕೈಗೊಂಡಿಲ್ಲ. ಇಲ್ಲಿ ಜಿಲ್ಲಾಡಳಿತಕ್ಕೂ ಜವಾಬ್ದಾರಿ ಇಲ್ಲ. ನಗರಪಾಲಿಕೆ ಆಯುಕ್ತರಿಗೂ ಜವಾಬ್ದಾರಿ ಇಲ್ಲ ಎಂದು ಕಿಡಿಕಾರಿದರು.
ಅರಮನೆಯಲ್ಲಿ ಪ್ರವೇಶ ಶುಲ್ಕ ಹೆಚ್ಚುತ್ತಿದೆ. ವಾಹನ ನಿಲ್ದಾಣ, ಚಪ್ಪಲಿ ಸ್ಟ್ಯಾಂಡ್ ಎಲ್ಲದಕ್ಕೂ ದುಡ್ಡು ವಸೂಲಾಗುತ್ತಿದೆ. ಪೊಲೀಸರು ಸಿಕ್ಕಸಿಕ್ಕವರನ್ನು ಅರಮನೆ ಒಳಗೆ ಬಿಡುತ್ತಿದ್ದಾರೆ. ಎಲ್ಲಾ ಕಡೆ ಹಣ ವಸೂಲಿಯಾಗುತ್ತಿದೆ. ಅರಮನೆ ಒಳಗೆ ಬರುವವರನ್ನು ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದರು.





