ಮೈಸೂರು : ಕಾವೇರಿ ಹೋರಾಟದ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಸಿಎಂ, ಕಾವೇರಿ ವಿಚಾರದಲ್ಲಿ ರಾಜಕೀಯ ಬೇಡ. ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಬಿಜೆಪಿಗರನ್ನು ನಾವೆಲ್ಲಾ ಮೊದಲು ಚಡ್ಡಿಗಳು ಅಂತಿದ್ದೆವು. ಇದೀಗ ಚಡ್ಡಿ ಧರಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ ಅಷ್ಟೇ ಎಂದಿದ್ದಾರೆ.
ನಿನ್ನೆ ಮಂಡ್ಯದಲ್ಲಿ ಬಿಜೆಪಿ ನಾಯಕರಾದ ಬಿ.ವೈ ವಿಜಯೇಂದ್ರ, ಅಶ್ವತ್ಥ್ ನಾರಾಯಣ್ ಅವರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಕಾವೇರಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಬೆರೆಸುತ್ತಾ ಇರೋದು ದುರದೃಷ್ಟಕರ. ಇದು ರಾಜಕಾರಣದ ದೃಷ್ಟಿಯಿಂದ ಅಷ್ಟೇ. ಜನರಿಗಾಗಿ, ರಾಜ್ಯದ ಹಿತದೃಷ್ಟಿಯಿಂದ ಮಾಡುತ್ತಿಲ್ಲ. ಬಿಜೆಪಿಯವರನ್ನ ಮೊದಲೆಲ್ಲಾ ಚಡ್ಡಿಗಳೆಂದು ಕರೆಯುತ್ತಾ ಇದ್ದೆವು. ರಾಜಕೀಯ ಲಾಭಕ್ಕಾಗಿ ಕಾವೇರಿ ವಿಚಾರವನ್ನ ರಾಜಕೀಯಗೊಳಿಸಲಾಗುತ್ತಿದೆ. ಪ್ರತಿಭಟನೆ ಮಾಡೋಕೆ ನಮ್ಮ ತಕರಾರು ಇಲ್ಲ. ಆದರೆ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೂ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನಮ್ಮನ್ನು ಡಿಎಂಕೆಯ ಬಿ ಟೀಮ್ ಎಂದಿದ್ದಾರೆ. ಬಿಜೆಪಿ ಕೂಡ ಎಐಡಿಎಂಕೆ ಜೊತೆ ಇದ್ದರು. ರಾಜ್ಯದ ಹಿತಕ್ಕಾಗಿ ನಾವು ಎಂದೂ ಹಿಂದೆ ಬಿದ್ದಿಲ್ಲ. ನಮಗೆ ಅಧಿಕಾರ ಎಂದಿಗೂ ಮುಖ್ಯವಲ್ಲ. ರಾಜಕೀಯಕ್ಕಾಗಿ ಬಾಯಿಗೆ ಬಂದಂತೆ ಹೇಳಬಾರದು. ರಾಜ್ಯ ಸರ್ಕಾರಕ್ಕೆ ರೈತರ ಹಿತವೇ ಮುಖ್ಯ ಎಂದರು. ಕಾವೇರಿ ಹೋರಾಟಗಾರರ ಬಗ್ಗೆಯೂ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಪ್ರತಿಭಟನೆ ವಿರುದ್ಧ ಸುಪ್ರೀಂಕೋರ್ಟ್ ಆದೇಶವಿದೆ. ಅದಕ್ಕಾಗಿ ಬೆಂಗಳೂರಲ್ಲಿ ರಾಜ್ಯ ಸರ್ಕಾರ ಸೆಕ್ಷನ್ 144 ಜಾರಿಗೊಳಿಸಿದ್ದೇವೆ. ಪ್ರತಿಭಟನೆ ಮಾಡಲು ನನ್ನದೇನೂ ತಕರಾರಿಲ್ಲ. ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ಬೇಡ ಎಂದಿದ್ದಾರೆ.