ಮೈಸೂರು: ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ವಿರುದ್ಧ ಹೇಳಿಕೆ ನೀಡುವವರು ಅಯೋಗ್ಯರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದ ಟಿ.ಕೆ.ಲೇಔಟ್ ನಿವಾಸದಲ್ಲಿ ಇಂದು(ಜನವರಿ.31) ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ದೇಶದ ಎಲ್ಲಾ ನಾಗರೀಕರಿಗೂ ಅವರವರ ನಂಬಿಕೆ ಪ್ರಕಾರ ಬದುಕುವ ಸ್ವಾತಂತ್ರ್ಯವಿದೆ. ಕುಂಭಮೇಳದ ವಿರುದ್ಧ ಹೇಳಿಕೆ ನೀಡುವವರೇ ಅಯೋಗ್ಯರೆಂದು ಹೇಳುವವರೇ ಅಯೋಗ್ಯರು ಎಂದು ವಾಗ್ದಾಳಿ ನಡೆಸಿದರು.
ಹಿಂದೂ ಧರ್ಮದಲ್ಲಿ ಒಂದೇ ರೀತಿಯ ನಂಬಿಕೆ ಇದೆಯಾ? ಹಿಂದೂ ಧರ್ಮದಲ್ಲಿ ಅನೇಕ ರೀತಿಯ ನಂಬಿಕೆ ಇದೆ. ನಾಸ್ತಿಕರೂ ಸಹ ಹಿಂದೂ ಧರ್ಮದಲ್ಲಿದ್ದಾರೆ. ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡುತ್ತಾರೆ ಎಂದರು.
ಕುಂಭಮೇಳದಲ್ಲಿ ಸ್ನಾನದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಯಾರಿಗೆ ನಂಬಿಕೆ ಇರುತ್ತದೆ ಅವರು ಹೋಗಿ ಸ್ನಾನ ಮಾಡುತ್ತಾರೆ. ನಂಬಿಕೆ ಇಲ್ಲದವರು ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಲ್ಲ ಒಂದೇ ರೀತಿ ನಂಬಿಕೆ ಇರಬೇಕು ಎಂದು ಹೇಳಲು ಸಾಧ್ಯವಿಲ್ಲ. ನನಗೆ ದೇವರ ಮೇಲೆ ನಂಬಿಕೆ ಇದೆ ಎಂದು ಹೇಳಿದರು.