ಮೈಸೂರು : ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿ ದರ್ಶನಕ್ಕಾಗಿ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರು ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ತುಂಡು ಬಟ್ಟೆ ತೊಟ್ಟು ಬರದಂತೆ ಚಾಮುಂಡೇಶ್ವರಿ ಭಕ್ತರು ಮನವಿ ಮಾಡಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ಗುರುವಾರ ಭಿತ್ತಿಪತ್ರ ಹಿಡಿದು, ಸಾರ್ವಜನಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಜಾಗೃತಿ ಮೂಡಿಸಿದ ಭಕ್ತ ವೃಂದದವರು, ಸರ್ಕಾರ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಸ ಸಂಹಿತೆ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಚಾಮುಂಡೇಶ್ವರಿ ಭಕ್ತ ವೃಂದದ ಸಂಚಾಲಕ ಆನಂದ್ ಮಾತನಾಡಿ, ಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಗಮಿಸುವ ಸಾರ್ವಜನಿಕರು ಸರ್ಕಾರ ವಸ್ತ್ರ ಸಂಹಿತೆ ತರದಿದ್ದರೂ ಪರವಾಗಿಲ್ಲ ನಮ್ಮ ಸಂಸ್ಕೃತಿಯನ್ನು ಪಾಲಿಸಬೇಕು. ತಿರುಪತಿ, ಕೇರಳದ ಶಿವನ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾದರಿಯಲ್ಲಿ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ಮನವಿ ಮಾಡಿದರು.
ಮಹೇಶ್, ಶ್ರುತಿ, ಶ್ವೇತಾ, ಕಿರಣ್, ಬಸವರಾಜು, ಮಣಿ, ಸೌಮ್ಯ, ಚಂದ್ರು, ಶೇಖರ್, ಕಲ್ಪನಾ, ತಾಯಮ್ಮ, ಸರೋಜ, ಜಲಜಾಕ್ಷಿ ಇನ್ನಿತರರು ಹಾಜರಿದ್ದರು.





