ಮುಡಾ 300ಕೋಟಿ ರೂ.ಅಕ್ರಮ ಆಸ್ತಿ ಪ್ರಕರಣ
ಕೆ. ಬಿ. ರಮೇಶನಾಯಕ
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ೩೦೦ ಕೋಟಿ ರೂ. ಹಗರಣ ನಡೆದಿರುವುವನ್ನು ಜಾರಿ ನಿರ್ದೇಶನಾಲಯ ಬಯಲು ಮಾಡಿದ್ದು, ಇದಕ್ಕೆ ಬಿಲ್ಡರ್ ಒಬ್ಬರ ಡೈರಿಯೇ ಮೂಲ ಎಂದು ಹೇಳಲಾಗಿದೆ. ಇದಲ್ಲದೆ ಕೊಕನಟ್ ಎಂಬ ಕೋಡ್‌ವರ್ಡ್ ಒಂದನ್ನು ಡಿಕೋಡ್ ಮಾಡಿದಾಗ ಮತ್ತಷ್ಟು ಮಾಹಿತಿಗಳು ಬಹಿರಂಗವಾಗಿವೆ.
ಬಿಲ್ಡರ್ ಜಯರಾಮ್ ಮನೆಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ದಾಖಲೆ ಪತ್ರಗಳು ಮತ್ತು ಡೈರಿಯಲ್ಲಿ ಹಲವಾರು ಮಹತ್ವದ ಅಂಶಗಳು ಪತ್ತೆಯಾಗಿದ್ದು, ಇದರ ಆಧಾರದ ಮೇಲೆ ಹಲವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮತ್ತೆ ವಿಚಾರಣೆ ನಡೆಸಲು ಅವರನ್ನು ಯಾವುದೇ ಕ್ಷಣ ದಲ್ಲಿ ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವ್ಯವಹಾರಕ್ಕೆ ಕೋಡ್ ವರ್ಡ್: ಬೇನಾಮಿ ಆಸ್ತಿಯ ಉಸ್ತುವಾರಿ ಹೊತ್ತಿದ್ದ ಬಿಲ್ಡರ್ ಜಯ ರಾಮ್ ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಹೊಂದಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ನಡೆಸುತ್ತಿದ್ದ ವ್ಯವಹಾರದ ಕೋಡ್‌ವರ್ಡ್ ಬಯಲಾಗಿದ್ದು, ವಾಟ್ಸಾಪ್ ಮೆಸೇಜ್‌ನಲ್ಲಿ ಗೊತ್ತಾಗಿದೆ. ಬೇನಾಮಿ ವ್ಯವಹಾರ ಮಾಡುವಾಗ ವೈಟ್ ಮತ್ತು ಬ್ಲಾಕ್ ಮನಿಯ ಬಗ್ಗೆ ಗುಟ್ಟು ಬಿಟ್ಟುಕೊಡ ದಿರಲು ಕೊಕನಟ್ ಎನ್ನುವ ಕೋಡ್‌ವರ್ಡ್ ಬಳಸುತ್ತಿದ್ದರು. ಒಂದು ಕೊಕನಟ್ ಎಂದರೆ ೧ ಲಕ್ಷ ರೂ. , ೫೦ ಕೊಕನಟ್ ಅಂದರೆ ೫೦ ಲಕ್ಷ ರೂ. , ೧೦೦ ಕೊಕ ನಟ್ ಅಂದರೆ ಒಂದು ಕೋಟಿ ರೂ. ರವಾನೆಯಾಗುತ್ತಿತ್ತು. ಡೈರಿಯಲ್ಲಿ ಸಿಕ್ಕಿದ್ದ ದಾಖಲೆಗಳಿಗೂ ಮತ್ತು ವಾಟ್ಸಾಪ್‌ನಲ್ಲಿ ರವಾನೆಯಾಗುತ್ತಿದ್ದ ಮೆಸೇಜ್ ಗಳಿಗೂ ತಾಳೆ ಆಗಿದೆ. ಹೀಗಾಗಿ, ಅಕ್ರಮ ಹಣ ವರ್ಗಾವಣೆ ಹೆಸರಿನಲ್ಲಿ ಶಾಮೀಲಾಗಿರುವ ಹಲವರನ್ನು ವಿಚಾರಣೆ ನಡೆಸಲು ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಪತ್ತೆಯಾಗಿದ್ದು ಹೇಗೆ ?: ವಿಜಯನಗರದಲ್ಲಿ ೧೪ ನಿವೇಶನಗಳನ್ನು ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಽಸಿದಂತೆ ಸಿಎಂ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ೧೮೬೦ರ ಐಪಿಸಿಯ ವಿವಿಧ ಸೆಕ್ಷನ್ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, ೧೯೮೮ರ ಅಡಿಯಲ್ಲಿ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ತನಿಖೆ ಶುರು ಮಾಡಿದ ಇ. ಡಿ. ಅಽಕಾರಿಗಳು ಬಿಲ್ಡರ್ ಜಯರಾಮ್ ಮನೆ, ಕಚೇರಿಯ ಮೇಲೆ ಅಕ್ಟೋಬರ್ ೨೯ರಂದು ದಾಳಿ ನಡೆಸಿ ಸತತ ೭೦ ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದರು. ಈ ವೇಳೆ ಹಲವಾರು ಬೇನಾಮಿ ಆಸ್ತಿಗಳ ದಾಖಲೆಗಳು, ದಿನನಿತ್ಯದ ಚಟುವಟಿಕೆಗಾಗಿ ಬಳಸುತ್ತಿದ್ದ ಡೈರಿ ಪತ್ತೆಯಾಗಿತ್ತು.
ನಂತರ, ಮತ್ತಷ್ಟು ಆಳಕ್ಕೆ ಇಳಿದ ಅಧಿಕಾರಿಗಳು ಜಯರಾಮ್ ಮನೆ ಮೇಲೆ ಎರಡನೇ ಬಾರಿ ದಾಳಿ ನಡೆಸಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ದಾಗ ಬೇನಾಮಿ ಹಗರಣಗಳು ಬಯಲಾಗಿವೆ. ಇ. ಡಿ. ಸುದೀರ್ಘ ತನಿಖೆ ನಂತರ ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದ ಹೆಸರಿನಲ್ಲಿ ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಬೇನಾಮಿ ಆಸ್ತಿ ಇರುವುದು ಪತ್ತೆಯಾಗಿದೆ. ಹಲವು ಶಾಸಕರು, ರಿಯಲ್ ಎಸ್ಟೇಟ್ ಉದ್ಯಮಿಗಳ ಹೆಸರಿನಲ್ಲಿ ಆಸ್ತಿ ಇರುವುದನ್ನು ಜಯರಾಮ್ ತನಿಖೆ ವೇಳೆ ಬಾಯಿ ಬಿಟ್ಟಿದ್ದಾರೆ. ಮುಡಾ ಮಾಜಿ ಆಯುಕ್ತ ಜಿ. ಟಿ. ದಿನೇಶ್‌ಕುಮಾರ್ ಸಂಬಂಧಿ ತೇಜಸ್‌ಗೌಡ ಹೆಸರಿನಲ್ಲಿ ಬೇನಾಮಿ ಆಸ್ತಿ ಸಂಗ್ರಹಿಸಿರುವುದನ್ನು ಒಪ್ಪಿಕೊಂಡಿರುವುದರಿಂದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ಲೋಕಾಯುಕ್ತ ವರದಿ ಮೇಲೂ ಪರಿಣಾಮ: ಮುಡಾ ಹಗರಣದ ಬಗ್ಗೆ ತನಿಖೆ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಜ. ೨೫ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿರುವ ಹೊತ್ತಿನಲ್ಲೇ ಇ. ಡಿ. ಬಿಡುಗಡೆ ಮಾಡಿರುವ ಪ್ರಾಥಮಿಕ ತನಿಖಾ ವರದಿ ದೊಡ್ಡ ಪರಿಣಾಮ ಬೀರುವಂತೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಪತ್ನಿ ಪಾರ್ವತಿ, ಜಮೀನಿನ ಮಾಲೀಕ ದೇವರಾಜು, ಸಿಎಂ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ, ಮುಡಾ ಮಾಜಿ ಆಯುಕ್ತ ಡಾ. ಡಿ. ಬಿ. ನಟೇಶ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಜಿ. ಕುಮಾರನಾಯಕ್, ಎಸ್. ಪಾಲಯ್ಯ, ಐಎಎಸ್ ಅಧಿಕಾರಿ ಎಚ್. ಎಂ. ಕಾಂತರಾಜು, ನಿವೃತ್ತ ಕೆಎಎಸ್ ಅಧಿಕಾರಿ ಡಾ. ಸಿ. ಜಿ. ಬೆಟಸೂರಮಠ ಅವರನ್ನು ವಿಚಾರಣೆಗೊಳಪಡಿಸಿರುವ ಲೋಕಾಯುಕ್ತ ಅಧಿಕಾರಿಗಳು ವರದಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ದಿನಗಣನೆ ಶುರುವಾಗಿದೆ.
ಮುಡಾ ಹಗರಣದಲ್ಲಿ ಬಗೆದಷ್ಟು ಹಗರಣಗಳ ಸತ್ಯ ಬಯಲಾಗು ತ್ತಿರುವುದರಿಂದ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿರುವ ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳಲ್ಲಿ ನಡುಕ ಮೂಡಿಸಿದೆ ಇದರ ಬೆನ್ನಲ್ಲೇ ಇ. ಡಿ. ಸಿಎಂ ಪತ್ನಿಗೆ ಮಂಜೂರಾಗಿರುವ ನಿವೇಶನ ಸೇರಿದಂತೆ ೧೪೨ ಸ್ಥಿರಾಸ್ಥಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಕಾರಣ ನ್ಯಾಯಾಲಯ ಯಾವ ನಿಲುವು ತಾಳಲಿದೆ ಎಂಬುದನ್ನು ಕಾದು ನೋಡಬೇಕಿದೆ.