ಗಬ್ಬೆದ್ದು ನಾರುತ್ತಿರುವ ಶೌಚಾಲಯಗಳು…., ಅಡ್ಡಾದಿಡ್ಡಿಯಾಗಿ ನಿಲ್ಲುವ ಬೈಕ್‌ಗಳು…!
-ಪ್ರಶಾಂತ್ ಎಸ್. ಮೈಸೂರು
ಮೈಸೂರು: ಧೂಳು ಹಿಡಿದಿರುವ ರೂಮ್‌ಗಳು.. ಎಲ್ಲೆಂದರಲ್ಲಿ ಬಿಸಾಡಿರುವ ಬಾಟಲಿಗಳು… ನೀರಿನ ವ್ಯವಸ್ಥೆ ಇಲ್ಲದೆ ಗಬ್ಬೆದ್ದು ನಾರುತ್ತಿರುವ ಶೌಚಾಲಯಗಳು…. ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಅಡ್ಡಾದಿಡ್ಡಿಯಾಗಿ ನಿಲ್ಲುವ ಬೈಕ್‌ಗಳು…!
ಇವು ಮೈಸೂರು ತಾಲ್ಲೂಕು ಕಚೇರಿ ಇರುವ ಮಿನಿ ವಿಧಾನಸೌಧದಲ್ಲಿ ಕಂಡುಬರುವ ದೃಶ್ಯಗಳು. ತಾಲ್ಲೂಕಿನ ಜನತೆ ತಮ್ಮ ಕೆಲಸ-ಕಾರ್ಯಗಳಿಗಾಗಿ ನಿತ್ಯ ಬಂದು ಹೋಗುವ ಈ ಕಚೇರಿ ಕಟ್ಟಡದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛತಾ ಅಭಿಯಾನವನ್ನೇ ಅಣಕಿಸುವಂತಿದೆ ಮೈಸೂರಿನ ತಾಲ್ಲೂಕು ಕಚೇರಿ.
ನಜರಬಾದ್ ರಸ್ತೆಯಲ್ಲಿರುವ ಮಿನಿ ವಿಧಾನಸೌಧದ ಆವರಣದಲ್ಲಿ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲು ಸೂಕ್ತ ಜಾಗವಿಲ್ಲದೆ ಸಾರ್ವಜನಿಕರು ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮತ್ತು ಮೂಲ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ ಎಂದು ಕಚೇರಿಗೆ ಬರುವ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ತಹಸಿಲ್ದಾರ್ ಕಚೇರಿಯೂ ಸೇರಿದಂತೆ ಇದೇ ಕಟ್ಟಡದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಿದ್ದು, ಇಲ್ಲಿಗೆ ಪ್ರತಿನಿತ್ಯ ಆಸ್ತಿ ನೋಂದಣಿ ಹಾಗೂ ಇನ್ನಿತರೆ ಕೆಲಸಗಳಿಗೆ ಸಾರ್ವಜನಿಕರು ಹೆಚ್ಚಾಗಿ ಬರುತ್ತಾರೆ. ಉಪ ನೋಂದಣಾಧಿಕಾರಿ ಕಚೇರಿಯ ದಾಖಲೆಗಳನ್ನು ಸಿದ್ಧಪಡಿಸಿ ಜನರಿಗೆ ನೀಡುವ ಸ್ಟ್ಯಾಂಪ್ ವೆಂಡರ್‌ಗಳು ಬೀದಿಯಲ್ಲಿ ಕುಳಿತು ಸಾರ್ವಜನಿಕರ ಕೆಲಸ ಮಾಡಿಕೊಡುತ್ತಿದ್ದಾರೆ. ಇವರಿಗೂ ಸೂಕ್ತ ವ್ಯವಸ್ಥೆ ಇಲ್ಲ. ಕಂದಾಯ, ರೇಷ್ಮೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉಪ ಖಜಾನೆ ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳು ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇಲ್ಲಿ ಸಾರ್ವಜನಿಕ ಶೌಚಾಲಯವಿದ್ದರೂ ಈವರೆಗೆ ಜನರ ಬಳಕೆಗೆ ಲಭ್ಯವಾಗಿಲ್ಲ. ಪಾರ್ಕಿಂಗ್ ಮಾಡುವ ವಾಹನಗಳ ಪೈಕಿ ಬಹುಪಾಲು ದ್ವಿಚಕ್ರ ವಾಹನ ಸವಾರರು ಕಾಂಪೌಂಡ್ ಹೊರಗೆ ಮತ್ತಷ್ಟು ಜನರು ರಸ್ತೆಯ ಮಧ್ಯೆ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕುಳಿತು ಕೊಳ್ಳುವ ಆಸನ ಸೇರಿದಂತೆ ಅನೇಕ ಸಮಸ್ಯೆಗಳು ಸಾರ್ವಜನಿಕರನ್ನು ಕಾಡುತ್ತಿದೆ.
ದುಸ್ಥಿತಿಯಲ್ಲಿರುವ ಶೌಚಾಲಯ ಕಟ್ಟಡಗಳು: ಮಹಿಳೆಉಯರ ಶೌಚಾಲಯ ಇದ್ದರೂ ಸದಾ ಬೀಗ ಹಾಕಿದ ಸ್ಥಿತಿಯಲ್ಲಿರುವುದರಿಂದ ಉಪಯೋಗಕ್ಕೆ ಬಾರದಂತಾಗಿದೆ. ಇಲ್ಲಿ ಸ್ವಚ್ಛತೆ ಎಂಬುದು ದೂರದ ಮಾತಾಗಿದೆ. ಸ್ವಚ್ಛತೆ ಅಸಮರ್ಪಕ ನಿರ್ವಹಣೆಯಿಂದ ಮಿನಿ ವಿಧಾನಸೌಧಕ್ಕೆ ತಮ್ಮ ಕೆಲಸಗಳ ನಿಮಿತ್ತ ಬರುವ ಸಾರ್ವಜನಿಕರು ಪ್ರತಿದಿನವೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿದ್ದಾರೆ.
ಸಾರ್ವಜನಿಕರು ಕುಡಿಯುವ ನೀರಿಗೆ ತೊಂದರೆ ಎದುರಿಸುತ್ತ್ತಿದ್ದು, ಹೋಟೆಲ್‌ಗಳ ಮೊರೆ ಹೋಗುವಂತಾಗಿದೆ. ನಗರದ ವಿವಿಧೆಡೆಯಿಂದ, ದೂರದ ಊರುಗಳಿಂದ ನಡೆದು ಬರುವ ಸಾರ್ವಜನಿಕರು ಮತ್ತು ಸಿಬ್ಬಂದಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ತಹಸಿಲ್ದಾರರು ಕ್ರಮ ಕೈಗೊಳ್ಳಬೇಕು.
-ಪೈ.ದೀಪಕ್ ಕಿರಣ್, ಮೈಸೂರು.
ಈ ಸಮಸ್ಯೆಗಳು ಈಗಾಗಲೇ ಗಮನಕ್ಕೆ ಬಂದಿದ್ದು, ಪಾರ್ಕಿಂಗ್ ಮಾಡಲು ಬದಲಿ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರು ಓಡಾಡಲು ಅನುಕೂಲ ಮಾಡಿಕೊಡುತ್ತೇವೆ. ಜತೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡುತ್ತಿದ್ದೇವೆ. ಶೌಚಾಲಯವನ್ನು ಸಾರ್ವಜನಿಕರು ಉಪಯೋಗಿಸಿದ ಬಳಿಕ ನೀರು ಹಾಕದೇ ಇರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಇವೆಲ್ಲಾ ಸಮಸ್ಯೆಗಳನ್ನು ಕೂಡಲೇ ಪರಿಹರಿಸುತ್ತೇವೆ.
-ಬಿ.ಎನ್.ಗಿರೀಶ್, ತಹಸಿಲ್ದಾರ್.