ಮಂಡ್ಯ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ಕ್ಕೆ ಸೀಮಿತ ಮಾಡದೇ ಗ್ರಾಮ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಾರ್ಚ್ ತಿಂಗಳಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು, ಸಂವಾದ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳನ್ನು ಆಯೋಜಿಸಿ ಏಪ್ರಿಲ್ ಮಾಹೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್. ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಮಹಿಳೆಯರಿಗಾಗಿ ಮ್ಯೂಸಿಕಲ್ ಚೇರ್, ಹಗ್ಗ ಜಗ್ಗಾಟದ ರೀತಿಯ ಸುಲಭವಾದ ಸ್ಪರ್ಧೆಗಳನ್ನು ಆಯೋಜಿಸುವ ಬದಲು ಕ್ರಿಕೆಟ್, ಚಿತ್ರಕಲಾ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲು ಯೋಜನೆಗಳನ್ನು ರೂಪಿಸಿ ಎಂದರು.
ಸ್ಪರ್ಧೆಗಳನ್ನು ಮೊದಲು ಗ್ರಾಮ, ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಂಘಟಿಸಿ ನಂತರ ಜಿಲ್ಲಾ ಮಟ್ಟದಲ್ಲಿ ಆಯೋಜಿಸಬೇಕು. ಇದರಿಂದ ಎಲ್ಲಾ ಆಸಕ್ತ ಮಹಿಳೆಯರಿಗೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಕ್ರೀಡೆ, ಕಲೆ, ಸಾಹಿತ್ಯ, ಉದ್ದಿಮೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಮಹಿಳೆಯರನ್ನು ಗುರುತಿಸಿ ಅವರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿ ಇದರಿಂದ ಮಹಿಳೆಯಲ್ಲಿ ಸಾಧನೆ ಮಾಡುವ ಮನೋಭಾವ ಬೆಳೆಯುತ್ತದೆ ಎಂದರು.
ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗಗಳನ್ನು ತೊಡೆದುಹಾಕಲು ಕಾನೂನು ಅರಿವು ಕಾರ್ಯಕ್ರಮಗಳು, ನಾಯಕತ್ವ ಗುಣಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಿ. ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಅಧಿಕಾರಿಗಳು ಚರ್ಚಿಸಿ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದರು.
ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿನಿಯರು, ವಿವಿಧ ಇಲಾಖೆಗಳ ಮೆಟ್ರಿಕ್ ನಂತರದ ಹಾಸ್ಟಲ್ ನಲ್ಲಿರುವ ವಿದ್ಯಾರ್ಥಿನಿಯರು ಸಹ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವಂತೆ ಪ್ರೋತ್ಸಾಹಿಸಿ, ವಿಜೇತರಾದ ವಿದ್ಯಾರ್ಥಿಗಳಿಗೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಒಂದು ದಿನ ಕಾರ್ಯನಿರ್ವಹಣೆಯನ್ನು ನೋಡುವ ಅವಕಾಶವನ್ನು ಸಹ ಕಲ್ಪಿಸಿಕೊಡಬಹುದು. ಇದರಿಂದ ಪ್ರೇರಣೆಗೊಂಡು ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಭಾಗವಹಿಸುತ್ತಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ; ಆಶಾಲತಾ, ವಾರ್ತಾ ಮತ್ತು ಸರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಹೆಚ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.