ಮಂಡ್ಯ: ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ಅದೇನು ಬಾಂಬ್ ಹಾಕ್ತಾರೋ ಹಾಕಲಿ ನೋಡೋಣ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ.
ಈ ಕುರಿತು ಮಂಡ್ಯದಲ್ಲಿಂದು ಮಾತನಾಡಿದ ಅವರು, ಎರಡು ವರ್ಷ ಎಲ್ಲೋ ಇದ್ದ ರಾಹುಲ್ ಗಾಂಧಿ, ಈಗ ಚುನಾವಣೆಗೋಸ್ಕರ ಕರ್ನಾಟಕಕ್ಕೆ ಬಂದಿದ್ದಾರೆ. ಕಳೆದ ಎರಡು ವರ್ಷದ ಅವಧಿಯಲ್ಲಿ 2,000 ರೈತರ ಆತ್ಮಹತ್ಯೆ, ಗರ್ಭಿಣಿಯರ ಸಾವು, ಮೈಕ್ರೋ ಫೈನಾನ್ಸ್‌ನಿಂದ ಸಾವುಗಳಾದವು. ಇದೆಲ್ಲದರ ಜೊತೆಗೆ ಐಪಿಎಲ್ ವಿಜಯೋತ್ಸವದಲ್ಲಿ 11 ಜನ ಅಮಾಯಕ ಯುವಕರು ಸತ್ತರಲ್ಲ ಆಗ ಯಾಕೆ ಬರಲಿಲ್ಲ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನ ಚುನಾವಣಾ ಅಕ್ರಮಗಳನ್ನು ಹೋರಾಟವನ್ನು ಭೂತದ ಕೈಯಲ್ಲಿ ಭಗವದ್ಗೀತೆಗೆ ಹೋಲಿಸಿದರು. ರಾಹುಲ್ ಗಾಂಧಿ ಅದೇನು ಬಾಂಬ್ ಹಾಕ್ತಾರೋ ಹಾಕಲಿ ನೋಡೋಣ ಎಂದು ಸವಾಲು ಹಾಕಿದ ಆರ್ ಅಶೋಕ್ ಅವರು, ಕನಕಪುರ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂಬ ಕಾಂಗ್ರೆಸ್‌ನ ಆರೋಪಗಳನ್ನು ತಳ್ಳಿಹಾಕಿದರು. ಕಾಂಗ್ರೆಸ್‌ನ ಒಳಜಗಳ ಮರೆಮಾಚಲು ರಾಹುಲ್ ಗಾಂಧಿ ಕರೆತರುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.





