ಮಂಡ್ಯ : ಕಾರ್ಯಕ್ರಮ ಇದ್ದಾಗ ರಕ್ಷಣೆ ಕೊಡುವುದು ಪೊಲೀಸರ ಕರ್ತವ್ಯ. ಲಾಠಿ ಹಿಡಿದು ನಿಂತ್ಕೊಳೋದು ನಮ್ ಜವಾಬ್ದಾರಿ ಅಲ್ಲ. ಇಂಟಲಿಜೆನ್ಸಿ ಬಳಸಿ ಸೆಕ್ಯೂರಿಟಿ ಕೊಡಬೇಕಾದದ್ದು ಪೊಲೀಸರ ಕರ್ತವ್ಯ. ನಾವು ಬಲವಂತವಾಗಿ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮ ಮಾಡಿದ್ದಲ್ಲ ಎಂದು ಶಾಸಕ ಪಿ.ರವಿಕುಮಾರ್ ಸಮರ್ಥಿಸಿಕೊಂಡರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಸಿಎ ಮತ್ತು ಆರ್‌ಸಿಬಿ ಅವರು ಸಿಎಂ ಬಳಿ ವಿಧಾನಸೌಧದ ಎದುರು ವಿಜಯೋತ್ಸವ ಮಾಡುವಂತೆ ಕೇಳಿಕೊಂಡಿದ್ದರು. ನಂತರ ಸಿಎಂ ಸಿದ್ದರಾಮಯ್ಯ ಅದಕ್ಕೆ ಒಪ್ಪಿ ಕಾರ್ಯಕ್ರಮ ಮಾಡಿದ್ದಾರೆ. ಬಿಜೆಪಿಯವರಿಗೆ ಮಾಡೋಕೆ ಏನೂ ಕೆಲಸ ಇಲ್ಲ. ಹಾಗಾಗಿ ವೃಥಾ ಆರೋಪ ಮಾಡುತ್ತಿದ್ದಾರೆ ಎಂದರು.
ಡಾ. ರಾಜಕುಮಾರ್ ಅವರು ಮೃತಪಟ್ಟಾಗ ಯಾರೂ ಗಲಾಟೆ ಮಾಡ್ತಿರಲಿಲ್ಲ. ನನ್ನ ಕಣ್ಣ ಮುಂದೆ ಗುಂಡು ಹೊಡೆದರು. ಅಂದು ನನ್ನ ಕಣ್ಣಲ್ಲಿ ೪ ಹೆಣ ನೋಡಿದ್ದೀನಿ. ಬಿಜೆಪಿಯವರು ಸುಮ್ಮನೆ ಇದರ ಬಗ್ಗೆ ಮಾತನಾಡಬಾರದು. ಅವತ್ತು ವೈಫಲ್ಯ ಆಗಿರಲಿಲ್ವಾ ? ಯಾಕೆ ಅಭಿಮಾನಿಗಳಿಗೆ ಗುಂಡು ಹೊಡೆದರು? ಅವತ್ತು ಎಚ್‌ಡಿಕೆಗೆ ನೆನಪಿರಲಿಲ್ವಾ ಸೆಕ್ಯೂರಿಟಿ ಕೊಡಬೇಕು ಅಂತ ಎಂದು ಪ್ರಶ್ನಿಸಿದರು.
ಸಾವಿನ ಮೇಲೆ ರಾಜಕಾರಣ ಮಾಡುವುದು ಬಿಜೆಪಿಯವರ ಹುಟ್ಟುಗುಣ ಎಂದು ಛೇಡಿಸಿದರು. ನಾನು ಸಚಿವಕಾಂಕ್ಷಿಯಲ್ಲ ಸಂಪುಟ ಪುನರ್ ರಚನೆ ಊಹಾಪೋಹ. ಯಾವುದೇ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಾನು ಮಂತ್ರಿಗಿರಿ ಆಕಾಂಕ್ಷಿ ಅಲ್ಲ. ಮೊದಲ ಬಾರಿಗೆ ಶಾಸಕ ಆಗಿದ್ದೀನಿ, ಒಳ್ಳೆಯ ಕೆಲಸ ಮಾಡ್ತೀನಿ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಬದಲಾವಣೆ ವಿಚಾರ ನಮ್ಮ ಪಕ್ಷದಲ್ಲಿ ಚರ್ಚೆ ಆಗಿಲ್ಲ. ಎಲ್ಲವೂ ಊಹಾಪೋಹ.