Mysore
19
few clouds

Social Media

ಬುಧವಾರ, 21 ಜನವರಿ 2026
Light
Dark

ಶ್ರೀರಂಗಪಟ್ಟಣ-ಕುಶಾಲನಗರ ಹೆದ್ದಾರಿಯ ಎರಡೂ ಕಡೆ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ

ಮಂಡ್ಯ : ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದ ರೈತರ ನಿಯೋಗದ ಮನವಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಶ್ರೀರಂಗಪಟ್ಟಣ-ಕುಶಾಲನಗರ ಹೆದ್ದಾರಿ ಕಾಮಗಾರಿ ವೇಳೆ ಸರ್ವೀಸ್ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ನವದೆಹಲಿಯಲ್ಲಿನ ನಿತಿನ್ ಗಡ್ಕರಿ ಅವರ ಗೃಹ ಕಚೇರಿಗೆ ಭೇಟಿ ನೀಡಿ, ಶ್ರೀರಂಗಪಟ್ಟಣ-ಕುಶಾಲನಗರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಎರಡು ಭಾಗಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿಕೊಡಬೇಕು. ಒಂದು ವೇಳೆ ಹೆದ್ದಾರಿ ಪಕ್ಕದಲ್ಲಿ ಸರ್ವೀಸ್ ರಸ್ತೆ ಮಾಡಿಸದೇ ಹೋದಲ್ಲಿ ರೈತರು ತಮ್ಮ ಜಮೀನುಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ. ಜೊತೆಗೆ ರೈತರು ಬೆಳೆದ ಬೆಳೆಗಳನ್ನು ಸಾಗಾಣಿಕೆ ಸಹ ಮಾಡಲು ಸಾಧ್ಯವಿಲ್ಲ. ಅಲ್ಲದೆ ಶ್ರೀರಂಗಪಟ್ಟಣ ಒಂದು ಐತಿಹಾಸಿಕ ಪ್ರವಾಸಿ ತಾಣವಾಗಿರುವುದರಿಂದ ಸರ್ವಿಸ್ ರಸ್ತೆ ನಿರ್ಮಿಸಿಕೊಡುವಂತೆ ಎಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಸಚಿವರಿಗೆ ವಿವರವಾಗಿ ಮಾಹಿತಿ ನೀಡಿದರು.

ಮನವಿಗೆ ಸ್ಪಂದಿಸಿದ ಸಚಿವ ನಿತಿನ್ ಗಡ್ಕರಿ ಅವರು ನಿರ್ಮಾಣ ಮಾಡಲಾಗುತ್ತಿರುವ ಹೆದ್ದಾರಿಯ ಎರಡು ಭಾಗಗಳಲ್ಲಿ ಎತ್ತರದ ತಡೆಗೋಡೆಗಳು ನಿರ್ಮಾಣವಾಗುತ್ತಿರುವುದರಿಂದ ಯಾವುದೇ ಸರ್ವೀಸ್ ರಸ್ತೆ ನಿರ್ಮಿಸಿಕೊಡಲು ಸಾಧ್ಯವಿಲ್ಲ, ಆದರೂ ಎಚ್.ಡಿ ಕುಮಾರಸ್ವಾಮಿ ಅವರೇ ಖುದ್ದು ಆಗಮಿಸಿ, ರೈತರ ಪರವಾಗಿ ಸರ್ವೀಸ್ ರಸ್ತೆ ಕೇಳುತ್ತಿರುವುದನ್ನ ಪರಿಗಣನೆಗೆ ತೆಗೆದುಕೊಂಡು ಹೆಚ್ಚುವರಿಯಾಗಿ ಅಗತ್ಯ ಹಣ ಬಿಡುಗಡೆ ಮಾಡಿ, ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ವೇಳೆ ರೈತರು ಹರ್ಷವ್ಯಕ್ತಪಡಿಸಿ, ಸಚಿವರಾದ ನಿತಿನ್ ಗಡ್ಕರಿ, ಎಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.

ನಂತರ ರೈತ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ ಮಾತನಾಡಿ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತು ಕೊಟ್ಟಂತೆ ೨೦ಕ್ಕೂ ಹೆಚ್ಚು ರೈತರ ನಿಯೋಗವನ್ನ ದೆಹಲಿಗೆ ಕರೆತಂದು, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿಸಿದ್ದಾರೆ. ನಮ್ಮನ್ನ ನೋಡಿದಾಕ್ಷಣ ಕುಮಾರಸ್ವಾಮಿ ಅವರು, ಜಿಲ್ಲಾ ರೈತರು ಬಂದಿದ್ದಾರೆ ಎಂದು ಹೆಚ್ಚಿನ ಗೌರವ ತೋರಿಸಿ ಬಂದ ಎಲ್ಲರಿಗೂ ಊಟೋಪಚಾರ ನೀಡುವ ಜತೆಗೆ ಖುದ್ದು ಸಂಬಂಧಪಟ್ಟ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನ ಭೇಟಿ ಮಾಡಿಸಿ, ರೈತರ ದೊಡ್ಡ ತಲೆನೋವಾಗಿ ಪರಿಗಣಿಸಿದ್ದ ಸರ್ವೀಸ್ ರಸ್ತೆ ಮಾಡಿಸಿಕೊಡಲು ಒಪ್ಪಿಸಿದ್ದಾರೆ. ಹಾಗಾಗಿ ನಮ್ಮ ಭಾಗದ ರೈತರು ಸೇರಿದಂತೆ ಸಾರ್ವಜನಿಕರು ಆಭಾರಿಯಾಗಿದ್ದೇವೆ ಎಂದು ಹೇಳಿದರು.

ಈ ವೇಳೆ ಪಾಲಹಳ್ಳಿ ಗ್ರಾಮದ ಡಾ. ಡಿ.ಎ.ಪ್ರಶಾಂತ್, ವೆಂಕಟೇಶ್, ರವಿ, ಎಂಪಿಸಿಎಸ್ ಅಧ್ಯಕ್ಷ ಲೊಕೇಶ್, ಶ್ರೀರಂಗಪಟ್ಟಣ ಸುನಿಲ್, ಚಂದನ್, ಪಶ್ಚಿಮವಾಹಿನಿ ಸತ್ಯಪ್ಪ, ಪುರಸಭಾ ಮಾಜಿ ಸದಸ್ಯರಾದ ಸಾಯಿ ಕುಮಾರ್, ವೆಂಕಟೇಶ್, ಅಶ್ವಥ್ ನಾರಾಯಣ, ಲೊಕೇಶ್, ರಾಂಪುರ ಪ್ರೀತಂ, ಪ್ರವೀಣ್, ರಾಕೇಶ್ ಸೇರಿದಂತೆ ಇತರರಿದ್ದರು.

Tags:
error: Content is protected !!