ಮಂಡ್ಯ : ಅಪರಿಚಿತ ವಾಹನವೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಯಲಿಯೂರು ಗ್ರಾಮದ ಬಳಿ ಸಂಭವಿಸಿದೆ.
ಮೃತ ಸ್ಕೂಟರ್ ಸವಾರನನ್ನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೊಡ್ಡ ತುಪ್ಪೂರು ಗ್ರಾಮದ ಲೋಕೇಶ್ (38) ಎಂದು ಗುರುತಿಸಲಾಗಿದೆ.
ಮೂಲತಃ ಕಲಾವಿದ ವೃತ್ತಿ ನಡೆಸುತ್ತಿದ್ದ ಲೋಕೇಶ್ ಅವರು ಇಂದು ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ತಮ್ಮ ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.ತೀವ್ರ ಗಾಯಗೊಂಡ ಲೋಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತರ ದೇಹವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಗ್ರಾಮಾಂತರ ಪೊಲೀಸರು,ಅಪರಿಚಿತ ವಾಹನದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.