ಮಂಡ್ಯ : ಮಂಡ್ಯ ನಗರ ಸೇರಿದಂತೆ ಇತರೆ ಕಡೆಗಳಲ್ಲಿ ಮನೆಗೆ ಕನ್ನ ಹಾಕಿ ಚಿನ್ನಾಭರಣಗಳನ್ನು ದೋಚುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ 18.20 ಲಕ್ಷ ಮೌಲ್ಯದ 182 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಗೋಪಿಕೃಷ್ಣ ಅಲಿಯಾಸ್ ಗೋಪಿ, ಮದ್ದೂರು ತಾಲ್ಲೂಕು ಸೋಮನಹಳ್ಳಿ ಗ್ರಾಮದ ಎಸ್.ಕೆ. ಸುರೇಶ್ ಅಲಿಯಾಸ್ ಸೂರಿ ಬಂಧಿತ ಆರೋಪಿಗಳು.
ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣಗಳನ್ನು ದೋಚುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖದೀಮರನ್ನು ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ.ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಮಂಡ್ಯ ಉಪವಿಭಾಗ ಡಿವೈಎಸ್‌ಪಿ ಎಚ್.ಲಕ್ಷ್ಮೀನಾರಾಯಣ ಪ್ರಸಾದ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ನವೀನ್ ಸುಪೇಕರ್, ಪಿಎಸ್‌ಐ ಎಸ್.ಜಿ.ಶೇಷಾದ್ರಿ ಕುಮಾರ, ಅಪರಾಧ ವಿಭಾಗದ ಪಿಎಸ್‌ಐ ಬಿ.ಎಸ್. ವೆಂಕಟೇಶ್, ಸಿಬ್ಬಂದಿಗಳಾದ ಟಿ.ಲಿಂಗರಾಜು, ಉಮರ್ ಅಹಮದ್ ಫಾರೂಖಿ, ಅನಿಲ್ ಕುಮಾರ್, ಓಬೇದುಲ್ಲಾ ಖಾನ್, ದಕ್ಷಿಣ ಮೂರ್ತಿ, ಮಂಜುನಾಥ, ಪ್ರಭುಸ್ವಾಮಿ, ಕುಮಾರ್, ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯ ಮಹೇಶ್, ಕೃಷ್ಣ, ಲೋಕೇಶ್ ಹಾಗೂ ರವಿಕಿರಣ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಸದರಿ ತಂಡವು ಕಳೆದ ಜು.7ರಂದು ಆರೋಪಿಗಳಾದ ಗೋಪಿಕೃಷ್ಣ, ಎಸ್.ಕೆ. ಸುರೇಶ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿ ಮನೆ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಒಟ್ಟು 3 ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಗಳಿಂದ 18.20 ಲಕ್ಷ ಮೌಲ್ಯದ 182 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.





