ಮದ್ದೂರು : ಪಟ್ಟಣದ ಎಳೆನೀರು ಮಾರುಕಟ್ಟೆ ಬಳಿ ಹಾಲಿನ ಟ್ಯಾಂಕರ್ ಬೈಕ್ ಸವಾರನ ಮೇಲೆ ಹರಿದು ಸವಾರ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಂದು ಪ್ರಕರಣದಲ್ಲಿ ಕಿರು ಸೇತುವೆಗೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.
ಕೆ.ಆರ್.ಪೇಟೆ ತಾಲ್ಲೂಕಿನ ಗೊಲ್ಲರಕೊಪ್ಪಲು ಗ್ರಾಮದ ದೀಪಕ್(೨೧) ಎಂಬವರು ಸೋಮನಹಳ್ಳಿ ಎಸ್.ಸಿ.ಎಂ.ಎಂ. ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ಕ್ರೀಡೆಗೆ ಬೈಕ್‌ನಲ್ಲಿ ತನ್ನ ಸಹೋದರಿಯನ್ನು ಬಿಟ್ಟು, ಮಂಡ್ಯ ಕಡೆಗೆ ಹಿಂದಿರುಗುತ್ತಿದ್ದಾಗ ಎಳೆನೀರು ಮಾರುಕಟ್ಟೆ ಬಳಿ ಟ್ಯಾಂಕರ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಶವವನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಯಿತು. ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇತುವೆಗೆ ಸ್ಕೂಟರ್ ಡಿಕ್ಕಿ; ಸವಾರ ಸಾವು:
ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿರುವ ಕಿರು ಸೇತುವೆಗೆ ಸ್ಕೂಟರ್ ಡಿಕ್ಕಿ ಹೊಡೆದು ಸೇತುವೆಗೆ ಹಾಕಿದ್ದ ಸರಳು ಚುಚ್ಚಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮದ್ದೂರು ತಾಲ್ಲೂಕಿನ ಬೆಟ್ಟದಾಸನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಕೆಸ್ತೂರು ಗ್ರಾಮದ ರಾಮು (೫೦) ಮೃತಪಟ್ಟವರು. ಬೆಟ್ಟದಾಸನದೊಡ್ಡಿ ರಸ್ತೆಯಲ್ಲಿ ಕಿರುಸೇತುವೆ ನಿರ್ಮಿಸುತ್ತಿದ್ದು, ಸ್ಕೂಟರ್‌ನಲ್ಲಿ ಬರುತ್ತಿದ್ದ ರಾಮು ಅವರು ಸ್ಕೂಟರ್ ಸಮೇತ ಸೇತುವೆ ಒಳಗೆ ಬಿದ್ದಿದ್ದು, ಸರಳು ದೇಹದೊಳಗೆ ನುಗ್ಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಿಯಮಾನುಸಾರ ಕಾಮಗಾರಿ ಸ್ಥಳದಲ್ಲಿ ಬ್ಯಾರಿಕೇಡ್ ಮತ್ತು ಕಾಮಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಫಲಕ ಅಳವಡಿಸಬೇಕು. ಆದರೆ, ಇದ್ಯಾವುದನ್ನು ಲೋಕೋಪಯೋಗಿ ಇಲಾಖೆ ಅಽಕಾರಿಗಳು ಮಾಡದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





