Mysore
25
overcast clouds
Light
Dark

ಮಳೆ, ಗಾಳಿಯಿಂದ ಪ್ರಾಣ ಹಾನಿಯಾಗದಂತೆ ಎಚ್ಚರಿಕೆ ವಹಿಸಿ: ಡಾ.ಕುಮಾರ

ಮಂಡ್ಯ: ಪ್ರಸಕ್ತ ವರ್ಷದ ಮಳೆಗಾಲ ಪ್ರಾರಂಭವಾಗುತ್ತಿದ್ದು, ಮಳೆ ಹಾಗೂ ಗಾಳಿಯಿಂದ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು (ಮೇ.೮) ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ಸಾಮಾನ್ಯ ಮಳೆಗಿಂತ ಅಧಿಕ ಮಳೆಯಾಗುವ ಸಾಧ್ಯತೆಯಿದ್ದು, ಮಳೆಯ ಜೊತೆ ಹೆಚ್ಚಿನ ಗಾಳಿಯು ಸಂಭವಿಸಲಿದೆ. ಕೂಡಲೇ ಎಲ್ಲಾ ಇಲಾಖೆಯವರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಸಂಬಂಧಪಟ್ಟ ಇಲಾಖೆಗಳು ಮುನ್ನಚ್ಚರಿಕೆ ಕ್ರಮಗಳನ್ನು ವಹಿಸದ ಕಾರಣ ಮಳೆ ಅಥವಾ ಬಿರುಗಾಳಿಯಿಂದ ಪ್ರಾಣ ಹಾನಿಯಾಗುತ್ತಿದೆ. ಇದು ಮುಂದಿವರೆದರೆ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದರ ಜೊತೆಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಅರಣ್ಯ ಇಲಾಖೆಯೊಂದಿಗೆ ಜಂಟಿಯಾಗಿ ರಸ್ತೆಗೆ ಚಾಚಿಕೊಂಡಿರುವ ದುರ್ಬಲ ಕೊಂಬೆಗಳನ್ನು ತೆರವುಗೊಳಿಸಿ. ಮಳೆ ಬಂದ ಸಂದರ್ಭದಲ್ಲಿ ಮರಗಳು, ವಿದ್ಯುತ್ ಕಂಬಗಳು ಗಾಳಿಯಿಂದ ಬಿದ್ದು ಹೋದಲ್ಲಿ ಅವುಗಳನ್ನು ತಕ್ಷಣ ತೆರವುಗೊಳಿಸುವಲ್ಲಿ ಇಲಾಖೆ ಸಜ್ಜಾಗಿರಬೇಕು. ಮಳೆಯ ಸಂದರ್ಭದಲ್ಲಿ ಕ್ಷಿಪ್ರವಾಗಿ ಕೆಲಸ ನಿರ್ವಹಿಸಲು ತಂಡಗಳನ್ನು ರಚಿಸಿಕೊಳ್ಳಿ ಎಂದರು.

ಒಳಚರಂಡಿಗಳಲ್ಲಿ ಕಸ ಹಾಗೂ ಇನ್ನಿತರೆ ವಸ್ತುಗಳು ಸೇರಿಕೊಂಡರೇ ಮಳೆ ನೀರು ಹರಿಯುವಿಕೆಗೆ ತೊಂದರೆಯಾಗುತ್ತದೆ. ಆಗಾಗಿ ಒಳಚರಂಡಿಗಳನ್ನು ದಿನನಿತ್ಯ ಸ್ವಚ್ಚಗೊಳಿಸಿ ಕಸ ತೆರವುಗೊಳಿಸಿ ಎಂದು ಹೇಳಿದರು.

ಈ ಹಿಂದೆ ಮಳೆಯಿಂದ ಮುಳುಗಡೆಯಾದ ಅಥವಾ ಹಾನಿಗೊಳಗಾದ ಗ್ರಾಮಗಳನ್ನು ಪಟ್ಟಿ ಮಾಡಿಕೊಳ್ಳಿ. ನುರಿತ ಈಜುಗಾರರು, ಜೆ.ಸಿ.ಬಿ ಹಾಗೂ ಹಿಟ್ಯಾಚಿ ಮಾಲೀಕರ ಸಂಪರ್ಕ ಸಂಖ್ಯೆಗಳನ್ನು ಸಂಗ್ರಾಹಿಸಿಟ್ಟಿಕೊಳ್ಳಿ. ಮಳೆಯಿಂದ ಮನೆ ಹಾನಿ ಅಥವಾ ಬೆಳೆ ಹಾನಿಯಾದಲ್ಲಿ ತಕ್ಷಣ ಪರಿಶೀಲಿಸಿ ತಹಶೀಲ್ದಾರ್ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜೊತೆಗೆ ವಿದ್ಯುತ್ ಕಂಬಗಳು ಸುಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು ಎಂದರು.

ಮಳೆ ಹಾಗೂ ಬಿರುಗಾಳಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮರಗಳ ಕೆಳಗಡೆ ವಾಹನಗಳ ನಿಲುಗಡೆ ಮಾಡದಂತೆ ಹಾಗೂ ಇನ್ನಿತರೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಎಂದರು.

ಕಂಟ್ರೋಲ್‌ ರೂ ಸ್ಥಾಪನೆ
ತಾಲ್ಲೂಕುವಾರು ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯತ್, ನಗರ ಸ್ಥಳೀಯ ಸಂಸ್ಥೆ, ಚೆಸ್ಕಾಂ ಹಾಗೂ ಅರಣ್ಯ ಇಲಾಖೆಗಳಲ್ಲಿ 2 ದಿನದೊಳಗಾಗಿ ಕಂಟ್ರೋಲ್ ರೂಂ ತೆರೆದು ಸಾರ್ವಜನಿಕರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳ ವಿವರವನ್ನು ಮಾಹಿತಿಗಾಗಿ ಅನಾವರಣಗೊಳಿಸಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ: ಹೆಚ್. ಎಲ್ ನಾಗರಾಜು, ಪಾಂಡವಪುರ ಉಪವಿಭಾಗಾಧಿಕಾರಿ ಮಾರುತಿ, ಚೆಸ್ಕಾಂ ಅಧೀಕ್ಷಕ ಅಭಿಯಂತರ ಸೋಮಶೇಖರ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ತೋಟಗಾರಿಕೆ‌ ಇಲಾಖೆ ಉಪನಿರ್ದೇಶಕಿ ರೂಪಶ್ರೀ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.