Mysore
22
broken clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಶಿಶು ಮರಣ ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಿ : ಸಿಇಒ ಸೂಚನೆ

Take appropriate action to prevent infant deaths: CEO's instruction
ಮಂಡ್ಯ: ಪ್ರತಿಯೊಂದು ಶಿಶುವಿಗೂ ಬದುಕುವ ಹಕ್ಕಿದ್ದು, ಜಿಲ್ಲೆಯಲ್ಲಿ ಯಾವುದೇ ಶಿಶು ಮರಣ ಆಗದಂತೆ ತಡೆಗಟ್ಟುವ ಜವಬ್ದಾರಿ ಆರೋಗ್ಯ ಇಲಾಖೆಯದ್ದಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ನಂದಿನಿ ಕೆ.ಆರ್. ಅಭಿಪ್ರಾಯಪಟ್ಟರು.
ಸೋಮವಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿನ ಡಾ.ಜೆ.ಎಲ್. ಜವರೇಗೌಡ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಿಶು ಮರಣಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.
ಗರ್ಭಾವಸ್ಥೆಯಿಂದಲೇ ಗುಣಮಟ್ಟದ ಆರೋಗ್ಯ ಸೇವೆ, ಸುರಕ್ಷಿತ ಹೆರಿಗೆಗೆ ಆದ್ಯತೆ, ಶಿಶು ಆರೈಕೆ ಮತ್ತು ತುರ್ತು ಚಿಕಿತ್ಸೆಯ ಲಭ್ಯತೆ, ಮೊದಲ 6 ತಿಂಗಳು ತಾಯಿ ಹಾಲನ್ನು ಮಾತ್ರ ನೀಡುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಪೋಷಕಾಂಶಯುಕ್ತ ಆಹಾರ ಸೇವನೆ, ಲಸಿಕಾಕರಣ ಹಾಗೂ ಪೋಷಕರಿಗೆ ಶಿಶು ಆರೋಗ್ಯದ ಕುರಿತು ಜಾಗೃತಿ ನೀಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಎದೆ ಹಾಲಿನ ಬ್ಯಾಂಕ್ ತೆರೆಯಲು ಅಧ್ಯಯನ ನಡೆಸಿ ಪ್ರಸ್ತಾವನೆ ಸಲ್ಲಿಸಲು ಸೂಚನೆ
ತಾಯಿ ಹಾಲು ಕೊರತೆಯುಳ್ಳ ಮಕ್ಕಳಿಗೆ ಬೇರೆ ತಾಯಂದಿರಿಂದ ಸುರಕ್ಷಿತವಾಗಿ ಸಂಗ್ರಹಿಸಲ್ಪಟ್ಟ ಹಾಲನ್ನು ನೀಡುವುದರಿಂದ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಮಾದರಿಯಲ್ಲಿ ಎದೆ ಹಾಲಿನ ಬ್ಯಾಂಕ್ ತೆರೆಯಬಹುದಾಗಿದ್ದು, ಈ ಕುರಿತು ಡಿ.ಹೆಚ್.ಓ. ನೇತೃತ್ವದ ತಂಡ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಅದ್ಯಯನ ನಡೆಸಿ ಪ್ರಸ್ತಾವನೆ ಸಲ್ಲಿಸಲು ಸಿಇಓ ಸೂಚಿಸಿದರು.
ಕಡಿಮೆ ಅಪಾಯ ಮತ್ತು ಹೆಚ್ಚು ಅಪಾಯವಿರುವ ಗರ್ಭಧಾರಣೆಗಳನ್ನು ಪ್ರತ್ಯೇಕಗೊಳಿಸಿ: ಶಿಶು ಮತ್ತು ತಾಯಿ ಇಬ್ಬರಿಗೂ ಗಂಭೀರ ತೊಂದರೆಗಳು ಉಂಟಾಗುವ ಸಂಭವವಿರುವ ಗರ್ಭಧಾರಣೆ ಮತ್ತು ಕಡಿಮೆ ತೊಂದರೆ ಇರುವ ಗರ್ಭಧಾರಣೆಗಳನ್ನು ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡುವಂತೆ ಹಾಗೂ ಯಾವುದೇ ಜೀವ ಹಾನಿಯಾಗದಂತೆ ಎಚ್ಚರಿಕೆ ವಹಿಸಯವುದು ಸುಲಭ ಎಂದರು.
ಮುಟ್ಟಿನ ಕಪ್ ವಿತರಣೆ ನಂತರ ಅನುಸರಣೆಯ ಜವಬ್ದಾರಿ ಆಶಾ ಕಾರ್ಯಕರ್ತೆಯರದ್ದು: ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್ ವಿತರಿಸಲಾಗುತ್ತಿದ್ದು, ಸದರಿ ಮುಟ್ಟಿನ ಕಪ್ ಬಳಕೆಯ ಬಗ್ಗೆ ಅನುಸರಣೆಯ ಜವಬ್ದಾರಿಯನ್ನು ಆಶಾ ಕಾರ್ಯಕರ್ತೆಯರು ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಕುಡಿಯುವ ನೀರಿಗೆ ಚರಂಡಿ ನೀರು ಸೇರ್ಪಡೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಕಾಲ ಕಾಲಕ್ಕೆ ಕುಡಿಯುವ ನೀರಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿ ಗ್ರಾಮ ಪಂಚಾಯತ್ ಗಳಿಗೆ ಮಾಹಿತಿ ನೀಡುವ ಕಾರ್ಯವನ್ನು ಖಚಿತಪಡಿಸಿಕೊಳ್ಳುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.
ಆಶಾ ಕಾರ್ಯಕರ್ತೆಯರು ಕಡ್ಡಾಯವಾಗಿ ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಮೂಲಕ ಶಿಶುವಿನ ಆರೋಗ್ಯದಲ್ಲಿನ ಸಮಸ್ಯೆಗಳನ್ನು ಮುಂಚಿತವಾಗಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಶಿಶು ಮರಣ ಪ್ರಮಾಣವನ್ನು ತಡೆಗಟ್ಟಬಹುದಾಗಿದ್ದು, ಈ ಕುರಿತು ತೆಗೆದುಕೊಳ್ಳಬಹುದಾದ ಸುಧಾರಣಾ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಸದರಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವಲ್ಲಿ ಉದಾಸೀನತೆ ತೋರುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಡಿ.ಹೆಚ್.ಓ. ರವರಿಗೆ ಸೂಚಿಸಿದರು.
ಈ ಸಂಧರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಆರ್.ಸಿ.ಹೆಚ್ ಅಧಿಕಾರಿ ಡಾ. ಅಶ್ವತ್, ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮಾಧಿಕಾರಿ ಡಾ. ಆಶಾಲತಾ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಸೋಮಶೇಖರ್, ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ. ಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕಾಂತರಾಜು ಮತ್ತು ತಾಲ್ಲೂಕು ವೈಧ್ಯಾದಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.
Tags:
error: Content is protected !!