Mysore
20
overcast clouds

Social Media

ಶುಕ್ರವಾರ, 01 ನವೆಂಬರ್ 2024
Light
Dark

ಗ್ರಾಮ‌ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಿ: ಡಾ ಹೆಚ್ ಎಲ್ ನಾಗರಾಜು

ಮಂಡ್ಯ: ಜಿಲ್ಲೆಯಲ್ಲಿ ಅಕ್ಟೋಬರ್ 26, 27 ರಂದು ಗ್ರಾಮ‌ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯು ನಡೆಯಲಿದೆ. ಪರೀಕ್ಷೆಯಲ್ಲಿ ಯಾವುದೇ ಲೋಪದೋಷವಿಲ್ಲದಂತೆ ವ್ಯವಸ್ಥಿತವಾಗಿ ನಡೆಸಿ ಎಂದು ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು ಹೇಳಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರ ನೇಮಕಾತಿ ಪರೀಕ್ಷೆಯ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಅಕ್ಟೋಬರ್ 26 ರಂದು ಮಧ್ಯಾಹ್ನ 2.30 ರಿಂದ 4.30 ಗಂಟೆಯವರೆಗೆ ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆಯ ಕಡ್ಡಾಯ ಕನ್ನಡ ಪರೀಕ್ಷೆಯು ಮಂಡ್ಯ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಲ್ಲುಕಟ್ಟಡ, ಸರ್ಕಾರಿ ಪದವಿ ಪೂರ್ವ ಕಾಲೇಜು (ಮಾಜಿಪುರ ಸಭೆ) ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಅರ್ಕೇಶ್ವರ ನಗರದಲ್ಲಿ ಒಟ್ಟು 3 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 1142 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಅಕ್ಟೋಬರ್ 27 ರಂದು ಬೆಳಿಗ್ಗೆ 10.30 ರಿಂದ 12.30 ಹಾಗೂ ಮಧ್ಯಾಹ್ನ 2.30 ರಿಂದ 4.30 ಗಂಟೆಯವರೆಗೆ ಎರಡು ಅಧಿವೇಶನಗಳಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ 10,301 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ, ಮಂಡ್ಯ -12, ಕೃಷ್ಣರಾಜಪೇಟೆ-2, ಮದ್ದೂರು-3 ಮಳವಳ್ಳಿ -2, ನಾಗಮಂಗಲ-2, ಪಾಂಡವಪುರ-1, ಶ್ರೀರಂಗಪಟ್ಟಣ – 1ರಂತೆ ಮಂಡ್ಯ ಜಿಲ್ಲಾದ್ಯಂತ ಒಟ್ಟು 23 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ‌ ಎಂದರು.

ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಅನಧೀಕೃತ ವ್ಯಕ್ತಿಗಳು ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದು. ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಸುತ್ತಮುತ್ತಲಿರುವ ಜೆರಾಕ್ಸ್ ಮತ್ತು ಸೈಬರ್ ಕೇಂದ್ರಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಆದೇಶ ಹೊರಡಿಸಲಾಗುವುದು ಎಂದರು.

ಪರೀಕ್ಷೆಗೆ ತಡವಾಗಿ ಬಂದ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸುವಂತಿಲ್ಲ ಹಾಗೂ ಪರೀಕ್ಷೆ ನಡೆಯುವಾಗ ಅರ್ಧಕ್ಕೆ ಅಭ್ಯರ್ಥಿಗಳನ್ನು ಕೊಠಡಿಯಿಂದ ಹೊರಗೆ ಕಳುಹಿಸುವಂತಿಲ್ಲ ಎಂದು ತಿಳಿಸಿದರು.

ಪರೀಕ್ಷಾ ಪರಿವೀಕ್ಷಕರು ಎಚ್ಚರಿಕೆಯಿಂದ ಪ್ರಶ್ನೆಪತ್ರಿಕೆಯನ್ನು ನೋಡಿಕೊಳ್ಳಬೇಕು, ಪರೀಕ್ಷೆ ಪ್ರಾರಂಭವಾಗುವುದಕ್ಕು ಒಂದು ಗಂಟೆ ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಕ್ರಮವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು, ಪ್ರಶ್ನೆ ಪತ್ರಿಕೆಯ ಕವರ್ ತೆರೆದಿರುವುದಿಲ್ಲ ಎಂದು ಖಾತ್ರಿಪಡಿಸಿಕೊಳ್ಳಬೇಕು. ಪರೀಕ್ಷೆಯ ಸಂಪೂರ್ಣ ಜವಾಬ್ದಾರಿ ಪರೀಕ್ಷಾ ಮೇಲ್ವಿಚಾರಕರುಗಳ ಮೇಲೆ ಇರಲಿವೆ ಎಂದು ಹೇಳಿದರು.

ಪರೀಕ್ಷಾ ದಿನದಂದು ಪರೀಕ್ಷೆಗೆ ಹಾಜರಾಗುವ ಮತ್ತು ಗೈರುಹಾಜರಾಗುವ ಅಭ್ಯರ್ಥಿಗಳ ವಿವರಗಳನ್ನು ಆನ್ಲೈನ್ ಮೂಲಕ ದಾಖಲಿಸುವಂತೆ ಪರೀಕ್ಷಾ ಕೇಂದ್ರಗಳ ಉಪಮುಖ್ಯ ಅಧೀಕ್ಷಕರುಗಳು/ ಪ್ರಾಂಶುಪಾಲರುಗಳಿಗೆ ಸೂಚಿಸಿದರು.

ಅಭ್ಯರ್ಥಿಗಳು ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲ್ಕುಲೇಟರ್, ಪೆನ್ ಡ್ರೈವ್ಗಳು, ಇಯರ್ ಫೋನ್ ಗಳು, ಮೈಕ್ರೋ ಫೋನ್ ಗಳು ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿ ಒಳಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.

ಡ್ರೆಸ್‌ ಕೋಡ್‌ ಪಾಲನೆ ಕಡ್ಡಾಯ
ಅಭ್ಯರ್ಥಿಗಳು ಬ್ಲೂಟೂತ್ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ಬಳಸುವುದನ್ನು ತಡೆಯುವ ಸಲುವಾಗಿ ಫುಲ್ ಶರ್ಟ್, ಶೂ, ಟೋಪಿ ಧರಿಸುವುದನ್ನು ಬಾಯಿ, ಕಿವಿ ಹಾಗೂ ತಲೆಮುಚ್ಚುವ ವಸ್ತ್ರವನ್ನು/ಸಾಧನವನ್ನು ಧರಿಸುವುದನ್ನು ನಿಷೇಧಿಸಿದ್ದು, ಯಾವುದೇ ರೀತಿಯ ಮಾಸ್ಕನ್ನು ಧರಿಸಿ ಪರೀಕ್ಷಾ ಕೇಂದ್ರದ ಒಳಗೆ ಬರುವಂತಿಲ್ಲ. ಮಹಿಳಾ ಅಭ್ಯರ್ಥಿಗಳು ಮಾಂಗಲ್ಯ ಸರ ಹಾಗೂ ಮೂಗುತಿಯನ್ನು ಹೊರತುಪಡಿಸಿ ಇನ್ನಾವುದೇ ಆಭರಣಗಳನ್ನು ಧರಿಸುವಂತಿಲ್ಲ ಎಂದರು.

ಕೆಇಎ ವತಿಯಿಂದ ನಡೆಸಲಾಗುವ ಸದರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಲೋಪ ದೋಷಗಳು ಉಂಟಾಗದ ರೀತಿಯಲ್ಲಿ ಬಹಳ ಎಚ್ಚರಿಕೆಯಿಂದ ಹಾಗೂ ಜಾಗೃತವಾಗಿ ಕರ್ತವ್ಯ ನಿರ್ವಹಿಸುವಂತೆ ಎಲ್ಲಾ ಅಧಿಕಾರಿಗಳಿಗೂ ಅಗತ್ಯ ಕ್ರಮ ವಹಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ಚೆಲುವಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ ಬಿ ವಿ ನಂದೀಶ್, ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ರವಿಶಂಕರ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೇಶವಮೂರ್ತಿ ಸೇರಿದಂತೆ ವಿವಿಧ ಕಾಲೇಜುಗಳ ಅಧ್ಯಾಪಕರುಗಳು ಉಪಸ್ಥಿತರಿದ್ದರು.

Tags: