ಗುಂಡ್ಲುಪೇಟೆ: ತಾಲ್ಲೂಕಿನ ಕಗ್ಗಳದಹುಂಡಿ ಗ್ರಾಮದ ಮನೆಯೊಳಗೆ ನುಗ್ಗಿದ್ದ ನಾಗರಹಾವನ್ನು ಉರಗಪ್ರೇಮಿ ಸ್ವಾಮಿ ಅವರು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಮನೆಯೊಳಗೆ ನಾಗರಹಾವು ಕಾಣಿಸಿಕೊಂಡಿದ್ದರಿಂದ ಕುಟುಂಬದವರು ಆತಂಕಗೊಂಡು ಉರಗಪ್ರೇಮಿ ಸ್ವಾಮಿ ಅವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ವಾಮಿ ಅವರು ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ಯಾವುದೇ ಅಪಾಯವಾಗದಂತೆ ನಾಗರಹಾವನ್ನು ಹಿಡಿದು ರಕ್ಷಣೆ ಮಾಡಿದರು.
ಬಳಿಕ ಅರಣ್ಯ ಇಲಾಖೆ ಮಾರ್ಗಸೂಚಿಯಂತೆ ನಾಗರಹಾವನ್ನು ಸೂಕ್ತ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು. ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿದ ಉರಗಪ್ರೇಮಿ ಸ್ವಾಮಿ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಅರಣ್ಯಾಧಿಕಾರಿಗಳು ಹಾಗೂ ಉರಗ ತಜ್ಞರ ಸಲಹೆಯಂತೆ, ಹಾವುಗಳು ಕಂಡುಬಂದಾಗ ಅವುಗಳನ್ನು ಕೊಲ್ಲಲು ಅಥವಾ ಹಿಡಿಯಲು ಪ್ರಯತ್ನಿಸದೇ ತಕ್ಷಣ ಉರಗ ರಕ್ಷಕರಿಗೆ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.




