ಮಂಡ್ಯ : ಇಂದಿನಿಂದ ಆರಂಭವಾದ ಸಮೀಕ್ಷೆಯು ಜಾತಿ ಸಮೀಕ್ಷೆಯಾಗಿರುವುದಿಲ್ಲ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ತಿಳಿಯಲು ಸಮೀಕ್ಷೆ ಕೈಗೊಳ್ಳಲಾಗಿದೆ. ಸಮೀಕ್ಷೆದಾರರು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ನಿಖರ ಮಾಹಿತಿ ನೀಡಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಂಡಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ನಗರದ ವಾರ್ಡ್ ನಂ. ೨೦ರ ಎಚ್.ಸಿ.ಬಸವರಾಜು ಅವರ ಮನೆಯಿಂದ ಚಾಲನೆ ನೀಡಿ ಮಾತನಾಡಿದ ಅವರು, ಸಮೀಕ್ಷೆದಾರರು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸಿ, ಅವರಿಗೆ ಅರ್ಥವಾಗುವ ರೀತಿ ನೀಡಿರುವ ಪ್ರಶ್ನಾವಳಿಗಳ ಪ್ರಶ್ನೆಯನ್ನು ಕೇಳಿ ಉತ್ತರ ಪಡೆಯಿರಿ ಎಂದರು.
ಮಂಡ್ಯ ಜಿಲ್ಲೆಯಲ್ಲಿ ೫,೨೯,೦೩೨ ಕುಟುಂಬಗಳಿದ್ದು, ೪೪೪೬ ಗಣತಿದಾರರನ್ನು ನೇಮಕ ಮಾಡಲಾಗಿದೆ. ಒಬ್ಬ ಗಣತಿದಾರರಿಗೆ ೧೨೦ ಕುಟುಂಬಗಳಂತೆ ಬ್ಲಾಕ್ ಹಂಚಿಕೆ ಮಾಡಲಾಗಿದೆ. ೨೦ ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯ ಸಂಪನ್ಮೂಲ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮನೆಯ ಮುಖ್ಯಸ್ಥರ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಮನೆ ವಿಳಾಸ ಮೊಬೈಲ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಖ್ಯೆ, ಕುಟುಂಬದ ಒಟ್ಟು ಸದಸ್ಯರು, ಧರ್ಮ ಜಾತಿ / ಉಪಜಾತಿ, ಜಾತಿ ವರ್ಗ, ಜಾತಿ ಪ್ರಮಾಣ ಪತ್ರ, ಪ್ರಮಾಣ ಪತ್ರ ಸಂಖ್ಯೆ, ಜನ್ಮ ದಿನಾಂಕ, ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ, ಜನ್ಮ ಸ್ಥಳ, ವಿದ್ಯಾಭ್ಯಾಸದ ಮಟ್ಟ, ಮನೆಯ ಮುಖ್ಯ ಉದ್ಯೋಗ ಹೀಗೆ ಒಟ್ಟು ೬೦ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಪಿ. ರವಿಕುಮಾರ್ ಗಣಿಗ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.





