ಮಂಡ್ಯ : ದಲಿತರರಿಗೆ ದೇವಾಲಯದಲ್ಲಿ ಪೂಜೆ ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಶಾಂತಿ ಸಭೆ ನಡೆಸಿ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಿ ಪೂಜೆ ಸಲ್ಲಿಕೆಗೆ ಮುಕ್ತ ಪ್ರವೇಶ ಕಲ್ಪಿಸುವಂತೆ ಸೂಚಿಸಿದ ಘಟನೆ ಜಿಲ್ಲೆಯ ಕೆ.ಎಂ.ದೊಡ್ಡಿ ಸಮೀಪದ ಅರೆಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ದಲಿತರಿಗೆ ಪೂಜೆ ಮಾಡಲು ನಿರಾಕರಿಸಿದಲ್ಲದೆ, ದೇವಸ್ಥಾನಕ್ಕೆ ಪ್ರವೇಶಕ್ಕೂ ಅವಕಾಶ ನೀಡದ ಘಟನೆ ಸೋಮವಾರ ನಡೆದಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀ ನಾಗಲಕ್ಷ್ಮಿ , ಕೆ.ಎಂ ದೊಡ್ಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದ್ ,ಹಾಗೂ ಕಂದಾಯ ನಿರೀಕ್ಷಕರಾದ ಮಹೇಶ್ ರವರ ನೇತೃತ್ವದಲ್ಲಿ ದಲಿತ ಹಾಗೂ ಸರ್ವಣಿಯರ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿ ದಲಿತರನ್ನು ದೇವಸ್ಥಾನಕ್ಕೆ ಪ್ರವೇಶ ಮಾಡಿ, ಪೂಜೆ ಸಲ್ಲಿಕೆಗೆ ಮುಕ್ತ ಪ್ರವೇಶ ಕಲ್ಪಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಕೆ.ಎಂ ದೊಡ್ಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆನಂದ್ ಮಾತನಾಡಿ ಗ್ರಾಮದಲ್ಲಿ ಶ್ರೀ ಶಂಭುಲಿಂಗೇಶ್ವರ, ಭೈರವೇಶ್ವರ ಕೊಂಡೋತ್ಸವದ ಸಂದರ್ಭದಲ್ಲಿ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ಮಾಡಲು ಹಾಗೂ ಪೂಜೆ ಮಾಡಲು ನಿರಾಕರಿಸಿದ ಘಟನೆಯೂ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಸಂವಿಧಾನದ ಆಶಯದಂತೆ ದಲಿತರು ಮುಕ್ತವಾಗಿ ದೇವಸ್ಥಾನವನ್ನು ಪ್ರವೇಶ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು ಕೂಡ ಗ್ರಾಮದಲ್ಲಿ ಕೆಲ ಕಟ್ಟುಪಾಡುಗಳಿಗೆ ಒಳಗಾಗಿ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಲು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸದೆ ಇರುವುದು ಕಾನೂನು ಬಾಹಿರವಾಗಿದೆ ಎಂದರು.
ಗ್ರಾಮದಲ್ಲಿ ಸರ್ವ ಸಮುದಾಯಗಳು ಒಗ್ಗಟ್ಟಿನಿಂದ ಒಗ್ಗೂಡಿ ಹಬ್ಬ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಆಚರಣೆಗಳನ್ನು ಮಾಡಬೇಕು, ಕಾನೂನಿಗೆ ಗೌರವ ಸಲ್ಲಿಸಬೇಕು, ಅಲ್ಲದೆ ಗ್ರಾಮದಲ್ಲಿ ಈ ರೀತಿ ಘಟನೆಗಳನ್ನು ಸಂಭವಿಸಿದರೆ ಅಂತಹವರ ವಿರುದ್ಧ ಕಠಿಣ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಚಿದಂಬರ ಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಶ್ರೀನಿವಾಸ, ಗ್ರಾಮದ ಮುಖಂಡರಾದ ಶಿವಲಿಂಗಯ್ಯ, ಚಿಕ್ಕಸ್ವಾಮಿ, ಜಾನಪದ ಕಲಾವಿದ ಸುಂದರೇಶ್, ಗ್ರಾಮ ಪಂಚಾಯಿತಿ ಸದಸ್ಯ ಸತೀಶ್, ನಾಡಗೌಡರಾದ ಕುಳ್ಳೆಗೌಡ, ಶಿವಲಿಂಗೇಗೌಡ, ಗೂಳಿಗೌಡ ಗ್ರಾಮ ಲೆಕ್ಕಿಗ ಅಕ್ಷಯ್ ಕೀರ್ತಿ, ಪೊಲೀಸ್ ಪೇದೆ ಶ್ರೀಧರ್ ರಾವ್ ಉಪಸ್ಥಿತರಿದ್ದರು.