ಬೆಂಗಳೂರು: ಸೂಕ್ತ ಖಾತೆ ಸಿಗದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದ್ದ ಸಚಿವ ರಾಮಲಿಂಗ ರೆಡ್ಡಿ ಅವರು, ಹೈಕಮಾಂಡ್ ನಾಯಕರ ಮಧ್ಯ ಪ್ರವೇಶದ ಹಿನ್ನೆಲೆ ರಾಜೀನಾಮೆಯನ್ನು ಹಿಂಪಡೆದಿದ್ದಾರೆ. ಇದರಿಂದ ಸರ್ಕಾರಕ್ಕೆ ಎದುರಾಗಿದ್ದ ಕಂಠಕ ತಾತ್ಕಾಲಿಕವಾಗಿ ನಿವಾರಣೆ ಆದಂತಾಗಿದೆ.
ರಾಜೀನಾಮೆಯ ಸುದ್ದಿ ಹೊರಬಿದ್ದ ಬೆನ್ನಲ್ಲೇ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಹೈಕಮಾಂಡ್ ತಕ್ಷಣವೇ ಮಧ್ಯಪ್ರವೇಶಿಸಿ, ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿತು. ಪಕ್ಷದ ಸಂಘಟನೆ ಮತ್ತು ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ರಾಮಲಿಂಗ ರೆಡ್ಡಿ ಅವರಂತಹ ಅನುಭವಿ ನಾಯಕರ ಅಗತ್ಯವನ್ನು ಮನವರಿಕೆ ಮಾಡಿಕೊಡುವಲ್ಲಿ ವರಿಷ್ಠರು ಯಶಸ್ವಿಯಾಗಿದ್ದಾರೆ.
ಶನಿವಾರ ಕಾಂಗ್ರೆಸ್ ಉಸ್ತುವಾರಿ ರಣಜಿತ್ ಸಿಂಗ್ ಸುರ್ಜೆವಾಲ ಅವರು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಮಲಿಂಗ ರೆಡ್ಡಿ ಜೊತೆ ಮಾತುಕತೆ ನಡೆಸಿ ರಾಜೀನಾಮೆ ಪತ್ರವನ್ನು ಹಿಂಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ನಿಮ್ಮ ರಾಜೀನಾಮೆಯಿಂದ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡುತ್ತವೆ ಇದರಿಂದ ಕೆಲವರು ನಿಮ್ಮ ದಾರಿಯನ್ನೇ ಅನುಸರಿಸಬಹುದು ಹೀಗಾಗಿ ಕೂಡಲೇ ರಾಜೀನಾಮೆ ಪತ್ರವನ್ನು ಹಿಂಪಡೆದುಕೊಳ್ಳಿ ಎಂದು ಸುರ್ಜೆವಾಲ ಮನವರಿಕೆ ಮಾಡಿಕೊಟ್ಟರು.
ಇದರ ಬೆನ್ನಲ್ಲೇ, ಕೋರಮಂಗಲದಲ್ಲಿರುವ ತಮ್ಮ ಕಚೇರಿ ಆಗಮಿಸಿದ ರೆಡ್ಡಿ ಅವರು ಆಪ್ತರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು.
ಬಳಿಕ ಮತ್ತೆ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಹರಿಪ್ರಸಾದ್ ಹಾಗೂ ಸುರ್ಜೆವಾಲ ಅವರುಗಳು ರಾಮಲಿಂಗ ರೆಡ್ಡಿ ಜೊತೆ ಎರಡನೇ ಬಾರಿ ಮತಗಟ್ಟೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾದರು.
ಇದರ ಬೆನ್ನಲ್ಲೇ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಸುರ್ಜೇವಾಲ ಮತ್ತು ಹರಿಪ್ರಸಾದ್ ರಾಮಲಿಂಗ ರೆಡ್ಡಿ ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆಯಲ್ಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಯಾವುದೇ ಕಾರಣಕ್ಕೂ ನನ್ನ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಅಂದರೆ ಇದರ ಅರ್ಥ ರಾಜೀನಾಮೆ ಪತ್ರ ತಿರಸ್ಕಾರವಾಗಿದೆ ಎಂಬರ್ಥ. ಮುಂದಿನ ದಿನಗಳಲ್ಲಿ ಸೂಕ್ತವಾದ ಸ್ಥಾನಮಾನ ನೀಡುವ ಭರವಸೆ ಸಿಕ್ಕಿದೆ. ನೋಡೋಣ ಸ್ವಲ್ಪ ದಿನ ಏನಾಗುತ್ತದೆಯೋ ಎಂದು ಸೂಚ್ಯವಾಗಿ ಹೇಳಿದರು.




