ಮಂಡ್ಯ: ನಾಯಕ ಜನಾಂಗದ ರಾಜಕೀಯ ಮುಖಂಡ ಶ್ರೀರಾಮುಲು ಅವರ ವಿರುದ್ಧ ಷಡ್ಯಂತ್ರ ರೂಪಿಸಿ ಕಡೆಗಣಿಸಲಾಗುತ್ತಿದ್ದು, ಬಿಜೆಪಿ ಪಕ್ಷ ಶ್ರೀರಾಮುಲು ಅವರಿಗೆ ಉನ್ನತ ಸ್ಥಾನಮಾನ ನೀಡಬೇಕು ಎಂದು ಶ್ರೀರಾಮುಲು ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ರಜತ್ ಒತ್ತಾಯಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಶ್ರೀರಾಮುಲು ಅವರು ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದರೂ ಬಿಜೆಪಿ ಪಕ್ಷ ಗುರುತಿಸಲಿಲ್ಲ. ಬಿಜೆಪಿ ಅಧಿಕಾರಾವಧಿಯಲ್ಲಿ ಅವರಿಗೆ ಉತ್ತಮವಾದ ಸಚಿವ ಖಾತೆಯನ್ನು ನೀಡಿಲ್ಲ. ಈಗಲಾದರೂ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ಮಾನ ನೀಡಬೇಕು ಎಂದು ಆಗ್ರಹಿಸಿದರು.
ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಶ್ರೀರಾಮುಲು ಅವರೇ ಕಾರಣ ಎಂದು ಅವರ ವಿರುದ್ಧ ತೇಜೋವಧೆಯ ಮಾತುಗಳನ್ನು ಹೇಳಲಾಗುತ್ತಿದ್ದು, ಪಕ್ಷದ ವರಿಷ್ಠರು ಈ ಬಗ್ಗೆ ಸತ್ಯಶೋಧನಾ ಸಮಿತಿ ರಚಿಸಿ ನಿಷ್ಪಕ್ಷಪಾತ ತನಿಖೆ ಮಾಡಿಸಿ ವರದಿ ಪಡೆದು ಮಾತನಾಡಬೇಕು ಎಂದು ಸಲಹೆ ನೀಡಿದರು.
ಸಾಕಷ್ಟು ವರ್ಷಗಳಿಂದ ಪಕ್ಷಕ್ಕೆ ದುಡಿದ ಶ್ರೀರಾಮುಲು ಅವರಿಗೆ ಬಿಜೆಪಿ ಪಕ್ಷ ಯಾವುದೇ ಉನ್ನತ ಮಟ್ಟದ ಸ್ಥಾನ ನೀಡಿಲ್ಲವಾಗಿದ್ದು, ಈಗಲಾದರೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಶ್ರೀರಂಗಪಟ್ಟಣ ಮಂಜು, ಮಳವಳ್ಳಿ ಮಲ್ಲೇಶ್, ಬಾಲು ಇದ್ದರು.