Mysore
14
few clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

19 ರಂದು ಸೌರಶಕ್ತಿ ಸ್ವ ಉದ್ಯೋಗ ಮೇಳ : 319 ಸ್ವಸಹಾಯ ಗುಂಪುಗಳ 800 ಮಹಿಳೆಯರು ಭಾಗಿ

ದರ್ಶನ್ ಪುಟ್ಟಣ್ಣಯ್ಯ

ಮಂಡ್ಯ: ಸೆಲ್ಕೊ ಫೌಂಡೇಶನ್ ಮತ್ತು ಪುಟ್ಟಣ್ಣಯ್ಯ ಫೌಂಡೇಶನ್‌ನಿಂದ ಪಾಂಡವಪುರದಲ್ಲಿ ಜು.19ರಂದು ಸೌರಶಕ್ತಿ-ಸ್ವ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಪ್ರಮುಖ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಸಂಘಟಿಸಿರುವ ಈ ಮೇಳವು ಪಾಂಡವಪುರದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ನಡೆಯಲಿದೆ. ಒಂದು ದಿನದ ಈ ಕಾರ‍್ಯಕ್ರಮದಲ್ಲಿ ಪಾಂಡವಪುರ ತಾಲ್ಲೂಕಿನ 8 ಗ್ರಾ.ಪಂ.ಗಳ ವ್ಯಾಪ್ತಿಯ 319 ಸ್ವಸಹಾಯ ಗುಂಪುಗಳ 800 ಮಹಿಳೆಯರು ಭಾಗವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಸ್ವಸಹಾಯ ಸಂಘಗಳು ಹಾಗೂ ಗುಂಪುಗಳನ್ನು ಒಂದೆಡೆ ಸೇರಿಸಿ ಮಹಿಳಾ ಸಬಲೀಕರಣದ ಮೂಲಕ ಹೊಸ ಸಾಧ್ಯತೆಗಳನ್ನು ಒದಗಿಸುವುದು ಈ ಮೇಳದ ಉದ್ದೇಶವಾಗಿದೆ. ಗುಡಿ ಕೈಗಾರಿಕೆ ಉತ್ಪನ್ನಗಳ ಉತ್ಪಾದನೆಗಾಗಿ ಮಹಿಳೆಯರು ಸ್ವ-ಉದ್ಯೋಗ ಆರಂಭಿಸಿ ಬದುಕು ರೂಪಿಸಿಕೊಳ್ಳಲು ಸೌರವಿದ್ಯುತ್ ಆಧಾರಿತ ಯಂತ್ರಗಳನ್ನು ಈ ಮೇಳದ ಮೂಲಕ ಮಹಿಳೆಯರಿಗೆ ಪರಿಚಯಿಸಿ, ಅವುಗಳನ್ನು ಒದಗಿಸಲಾಗುವುದು ಎಂದರು.

‘ಹವಾಮಾನ ಸ್ನೇಹಿ ಜೀವನೋಪಾಯ ಪರಿಹಾರಗಳ ಮೂಲಕ ಸಬಲೀಕರಣ’ ವಿಷಯವಾಗಿ ಮೇಳದಲ್ಲಿ ಸಂವಾದ, ಪ್ರಾತ್ಯಕ್ಷಿಕೆ, ಮಾದರಿ ಪ್ರಯೋಗಗಳ ಪ್ರದರ್ಶನ ನಡೆಯಲಿದೆ. ಚಕ್ಕುಲಿ, ಕೋಡುಬಲೆ, ಹಪ್ಪಳ, ಅಡಿಕೆ ತಟ್ಟೆಗಳು ಸೇರಿದಂತೆ ನಾನಾ ಆಹಾರ ಪದಾರ್ಥಗಳ ತಯಾರಿಕೆ ಮತ್ತು ಎಣ್ಣೆಗಾಣ ಸ್ಥಾಪನೆಗಾಗಿ ಅಗತ್ಯವಾದ ಸೌರವಿದ್ಯುತ್ ಆಧಾರಿತ ಯಂತ್ರಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿನಕ್ಕಿಡಲಾಗುವುದು ಎಂದು ವಿವರಿಸಿದರು.

ಮೇಳದಲ್ಲಿ 16 ಮಳಿಗೆಗಳನ್ನು ತೆರೆಯಲಾಗುವುದು. ಇದಕ್ಕೆ ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಸಹಕಾರ ನೀಡಲಿವೆ. ಮೇಳದಲ್ಲಿ ಬರುವ ಮಹಿಳೆಯರಿಗೆ ಕೌಶಲ್ಯ ತರಬೇತಿ, ಬ್ಯಾಂಕ್ ನೆರವಿನೊಂದಿಗೆ ಅವರು ಬಯಸುವ ಉತ್ಪನ್ನಗಳ ತಯಾರಿಕೆಯ ಯಂತ್ರಗಳನ್ನು ಕೊಡಿಸಲಾಗುವುದು ಎಂದು ಹೇಳಿದರು.

ಅಂದು ಬೆಳಗ್ಗೆ 10:30 ಕ್ಕೆ ಮೇಳ ಆರಂಭಗೊಳ್ಳಲಿದೆ. ಜಿ.ಪಂ ಸಿಇಒ ಕೆ.ಆರ್.ನಂದಿನಿ, ಸೆಲ್ಕೋ ಫೌಂಡೇಷನ್‌ನ ನಿರ್ದೇಶಕಿ ಹುದಾ ಜಾಫರ್, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಕೃಷಿ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ತೋಟಗಾರಿಕೆ ಇಖಾಖೆಯ ಉಪನಿರ್ದೇಶಕಿ ಕೆ.ಎನ್.ರೂಪಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಎಸ್.ರಾಜಮೂರ್ತಿ ಭಾಗವಹಿಸುವರು ಎಂದು ವಿವರಿಸಿದರು.

ಉತ್ತರ ಕರ್ನಾಟಕದ 16 ಜಿಲ್ಲೆಗಳಲ್ಲಿ ಕಾರ್ಯ: ಸೆಲ್ಕೋ ಫೌಂಡೇಶನ್‌ನ ಪ್ರಕಾಶ್ ಮೇತಿ ಮಾತನಾಡಿ, ಈಗಾಗಲೇ ಉತ್ತರ ಕರ್ನಾಟಕದ 16 ಜಿಲ್ಲೆಗಳಲ್ಲಿ ಸೆಲ್ಕೋ ಫೌಂಡೇಷನ್ ಕಾರ‍್ಯ ನಿರ್ವಹಿಸುತ್ತಿದೆ. ಇದೀಗ ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದ ಮೂಲಕ ದಕ್ಷಿಣ ಕರ್ನಾಟಕದಲ್ಲಿ ಫೌಂಡೇಷನ್‌ನ ಕಾರ‍್ಯಚಟುವಟಿಕೆಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಮಹಿಳೆಯರು ಆರಂಭಿಸುವ ಸ್ವಉದ್ಯೋಗಕ್ಕೆ ಪೂರಕವಾಗಿ ಸೌರವಿದ್ಯುತ್ ಯಂತ್ರ ಆರಂಭಿಸಲು ಹಣಕಾಸಿನ ವಿಷಯವಾಗಿ ಕೇಂದ್ರ ಸರ್ಕಾರದಿಂದ ಶೇ.3.5ರಷ್ಟು, ರಾಜ್ಯ ಸರ್ಕಾರದಿಂದ ಶೇ.15ರಷ್ಟು ಸೇರಿ ಒಟ್ಟು ಶೇ.50ರಷ್ಟು ಸೌರ ವಿದ್ಯುತ್ ಸೌಲಭ್ಯಕ್ಕೆ ಸಬ್ಸಿಡಿ ದೊರೆಯಲಿದೆ. ಅದನ್ನು ಕೊಡಿಸಿಕೊಡುವ ಕೆಲಸವನ್ನು ಸೆಲ್ಕೋ ಫೌಂಡೇಷನ್ ಮಾಡಲಿದೆ. ವಿವರಕ್ಕೆ 8105769666 ಸಂಪರ್ಕಿಸಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್‌ನ ರಂಜಿತ್, ಸೆಲ್ಕೋ ಫೌಂಡೇಶನ್‌ನ ಪ್ರಕಾಶ್ ಮೇತಿ ಹಾಜರಿದ್ದರು.

Tags:
error: Content is protected !!