ಮಂಡ್ಯ: ಸೌಜನ್ಯ ಕೊಲೆ ಪ್ರಕರಣ ಸಂಬಂಧ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ವಿವರಣೆ ನೀಡಿ, ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತಪರ ಹೋರಾಟಗಾರರು ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್.ಎಸ್.ಚಂದ್ರಶೇಖರ್ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೌಜನ್ಯ ಸಾವಿನ ಪ್ರಕರಣ ಸಂಬಂಧ ೧೩ ವರ್ಷಗಳಿಂದ ಹೋರಾಟಗಳು ನಡೆಯುತ್ತಿದ್ದು, ಈ ಸಂಬಂಧ ವೀರೇಂದ್ರ ಹೆಗ್ಗಡೆ ಅವರು ಪ್ರತಿಕ್ರಿಯೆ ನೀಡಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಬೇಕು ಎಂದರು.
ಸೌಜನ್ಯ ಕುಟುಂಬಕ್ಕೆ ಆದ ಅನ್ಯಾಯ ಇನ್ನಾವ ಹೆಣ್ಣು ಮಕ್ಕಳ ಕುಟುಂಬಕ್ಕೂ ಆಗಬಾರದು. ಇಂತಹ ಹೀನಾಯ ಕೃತ್ಯವನ್ನು ಇಡೀ ರಾಜ್ಯವೇ ಖಂಡಿಸುತ್ತದೆ. ವೀರೇಂದ್ರ ಹೆಗ್ಗಡೆಯವರಿಗೆ ಯಾವ ಒತ್ತಡವಿದೆಯೋ ತಿಳಿಯದು. ಅವರ ಮೂಲಕ ಸೌಜನ್ಯ ಕುಟುಂಬಕ್ಕೆ ನಾಯ ಒದಗಬೇಕು. ಅವರ ಜೊತೆಗೆ ನಾವಿದ್ದು, ಕರ್ನಾಟಕದ ಜನತೆ ಅವರ ಪರ ಇರಲಿದೆ ಎಂದು ಹೇಳಿದರು.
ಅವರ ಮೇಲಿನ ಅಭಿಮಾನದಿಂದಾಗಿ ರಾಜ್ಯ ಸರ್ಕಾರ, ಗೃಹ ಮಂತ್ರಿಗಳು, ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದು, ಎಗ್ಗಿಲ್ಲದೇ ನಡೆಯುವ ಅತ್ಯಾಚಾರ, ಕೊಲೆ, ಸುಲಿಗೆಯಂತಹ ಘಟನೆಗಳ ಬಗ್ಗೆ ಅರಿವಿಲ್ಲದೇ ಮೂಕ ಪ್ರೇಕ್ಷಕರಾಗಿರುವ ಮುಖ್ಯಮಂತ್ರಿಗಳು ಸದರಿ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಪ್ರಕರಣದ ತನಿಖೆ ನಡೆಸಿ ಸೌಜನ್ಯ ಕುಟುಂಬಕ್ಕೆ ಸರ್ಕಾರ ನ್ಯಾಯ ಕೊಡಿಸದೇ ಇದ್ದರೆ, ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಇದೇ ವೇಳೆ ಎಚ್ಚರಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಕೆ.ಸಂಜಯ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ರಮೇಶ್ ಇತರರಿದ್ದರು.





