Mysore
25
scattered clouds
Light
Dark

ಎಚ್‌ಡಿಕೆ, ಬಿಜೆಪಿ ನಾಯಕರ ನಡುವೆ ಬಿರುಕು: ಕಾಂಗ್ರೆಸ್‌ ಶಾಸಕ ರವಿಕುಮಾರ್

ಮಂಡ್ಯ: ರಾಜ್ಯದಲ್ಲಿ 136ಸೀಟು ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಮೈತ್ರಿ ನಾಯಕರು ಸಂಚು ರೂಪಿಸುತ್ತಿದ್ದಾರೆ. ಈ ನಡುವೆ ಅವರ ಮಧ್ಯೆಯೇ ಒಡಕು ಉಂಟಾಗಿದೆ. ಪಾದಯಾತ್ರೆ ವಿಚಾರದಲ್ಲಿ ಬಿಜೆಪಿಯಲ್ಲೇ ಹೊಂದಾಣಿಕೆಯಿಲ್ಲ. ಬಿ.ಎಸ್‌.ವೈ, ವಿಜಯೇಂದ್ರ, ಯತ್ನಾಳ್‌ ,ಎಚ್.ಡಿ ಕುಮಾರಸ್ವಾಮಿ ನಡುವೆ ಕಿತ್ತಾಟವಿದೆ ಎಂದು ಕಾಂಗ್ರೆಸ್‌ ಶಾಸಕ ಪಿ.ರವಿಕುಮಾರ್‌ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾನು ಮಾತನಾಡುವುದಿಲ್ಲ. ಸಿಎಂ ಸ್ಟ್ರಾಂಗ್‌ ಇದ್ದಾರೆ. ಅವರ ಪರ ನಾವೆಲ್ಲರೂ ಇದ್ದೇವೆ. ರಾಜ್ಯಪಾಲರ ನಡೆ ವಿರುದ್ಧ 136 ಶಾಸಕರು ಒಗ್ಗಾಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.

ಪ್ರಾಸಿಕ್ಯೂಷನ್‌ ಬಗ್ಗೆ ರಾಜ್ಯಪಾಲರಿಗೆ ಕಾಮನ್‌ ಸೆನ್ಸ್‌ ಇರಬೇಕಿತ್ತು. ಬೀದಿಲಿ ಹೋಗುವವರೆಲ್ಲ ಅವರ ಮೇಲೆ ಪ್ರಾಸಿಕ್ಯೂಷನ್‌ ಕೊಡಿ, ಇವರ ಮೇಲೆ ಕೊಡಿ ಅಂತ ಪತ್ರ ಕೊಟ್ಟರೆ ರಾಜ್ಯ ನಡೆಸುವುದು ಹೇಗೆ? 17B ಯಲ್ಲಿ ಸರಿಯಾಗಿ ನಮೂದಾಗಿದೆ ತನಿಖಾ ಅಧಿಕಾರಿ ಕೇಳಿದರೆ ಮಾತ್ರ ಕೊಡಬೇಕು. ರಾಜ್ಯಪಾಲರು ಈ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯಪಾಲರು ಬಿಜೆಪಿಯ ಏಜೆಂಟರ್‌ರಂತೆ ವರ್ತಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರು ದಿಲ್ಲಿಗೆ ಹೋದಾಗ ಅಮಿತ್‌ ಷಾ, ಎಚ್‌ಡಿಕೆ, ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ. ಮುರುದಿನ ಬೆಳಿಗ್ಗೆ ಬಂದು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಇದು ಸಂವಿಧಾನ ಬಾಹಿರವಾಗಿದೆ. ಅವರ ಈ ನಡೆ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ದೆಹಲಿ, ತಮಿಳುನಾಡು, ಪಶ್ಚಿಮ ಬಂಗಾಳ, ಛತ್ತೀಸ್‌ಗಢ ದಲ್ಲಿ ಬಿಜೆಪಿಯವರು ಅಸ್ಥಿರ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ ಶಾಸಕರು ಬಿಜೆಪಿಯ ತಂತ್ರ ವಿಫಲಗೊಳಿಸಲು ಕಾಂಗ್ರೆಸ್‌ ರಣತಂತ್ರ ಎಣೆಯುತ್ತಿದೆ ಎಂದರು.