ಮಂಡ್ಯ : ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಗಳಿಗೆ ರಿಸರ್ವ್ ಬ್ಯಾಂಕ್ ನಿಯಮಾವಳಿಯಂತೆ ನಿರ್ಬಂಧ ವಿಧಿಸಬೇಕು ಹಾಗೂ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ನಡೆಸಿದ ಕಾರ್ಯಕರ್ತೆಯರು,
ಮೈಕ್ರೋ ಫೈನಾನ್ಸ್ ಗಳ ಸಾಲದ ಸುಳಿಗೆ ಸಿಲುಕಿ ರಾಜ್ಯದಲ್ಲಿ ಮಹಿಳೆಯರು ಮತ್ತು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೆಚ್ಚಿನ ಬಡ್ಡಿ ಸುಲಿಗೆ, ಅಶ್ಲೀಲ ಪದ ಬಳಕೆ, ಹಣ ವಸೂಲಾತಿಗಾಗಿ ರೌಡಿಗಳ ಬಲ ಪ್ರಯೋಗದಂತಹ ಕ್ರೌರ್ಯಗಳು ಹೆಚ್ಚಾಗಿವೆ.
ಫೈನಾನ್ಸ್ ಸಂಸ್ಥೆಗಳು ಮಾತ್ರವಲ್ಲದೆ ರಾಜ್ಯದ ಪ್ರತಿಷ್ಠಿತ ಖಾಸಗಿ ಹಣಕಾಸು ಕಂಪನಿಗಳು ಅನಿಯಂತ್ರಿತ ಠೇವಣಿಗಳ ಯೋಜನೆಯಡಿ ಅಧಿಕ ಬಡ್ಡಿಯ ಅಸೆ ತೋರಿಸಿ ಜನರಿಂದ ಹಣ ದೋಚಿ ವಂಚಿಸಿರುವ ಘಟನೆಗಳು ಕೂಡಾ ಬೆಳಕಿಗೆ ಬಂದಿವೆ. ಈ ಪ್ರಕರಣಗಳ ವಿರುದ್ಧವು ಕೂಡಾ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಮೋಸ ಹೋದ ಜನರಿಗೆ ಯಾವುದೆ ಪರಿಹಾರ ದೊರೆತಿಲ್ಲ. ಇದರ ಜೊತೆಗೆ ಮೀಟರ್ ಬಡ್ಡಿ ದಂದೆಗಳು ಜನಸಾಮಾನ್ಯರನ್ನು ರಕ್ತ ಹೀರುವ ಜಿಗಣೆಗಳಂತೆ ಬಾಧಿಸುತ್ತಿವೆ.
ಸಾಲದ ಸುಳಿಯಿಂದ ಪಾರು ಮಾಡಲು ಸುಗ್ರಿವಾಜ್ಞೆ ಹೊರಡಿಸಿದರೆ ಪ್ರಯೋಜನವಿಲ್ಲ. ಅಲ್ಲದೆ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಮತ್ತು ಔದ್ಯೋಗಿಕವಾಗಿ ಸಬಲರಾಗಿ ಮಾಡದೆ ನೂರಾರು ಕಾನೂನು ಜಾರಿಮಾಡಿದರು ಪ್ರಯೋಜನವಿಲ್ಲ. ಇದನ್ನು ಅರಿತು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪೂರ್ಣಿಮಾ, ಸಿದ್ದರಾಜು, ಕಮಲ, ಶಿಲ್ಪ ಬಿ ಎಸ್, ಲತಾ ಶಂಕರ್, ಪ್ರಿಯ ರಮೇಶ್, ಗಿರಿಜಾ, ಸುಮಾ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.