ಮದ್ದೂರು: ಮದ್ದೂರು ಪಟ್ಟಣದ ಪೊಲೀಸ್ ಠಾಣೆಯ ವಿಶ್ರಾಂತಿ ಗೃಹದಲ್ಲಿ ಕಾನ್‌ಸ್ಟೇಬಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮೂಲದ ರಮೇಶ್(35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಮದ್ದೂರು ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಮಂಗಳವಾರ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ಕರ್ತವ್ಯ ನಿರತರಾಗಿದ್ದ ಅವಧಿಯಲ್ಲೇ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಂದು ತಡರಾತ್ರಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಮೃತ ರಮೇಶ್ ಪತ್ನಿ ಪುಷ್ಪಲತಾ ಪೊಲೀಸರಿಗೆ ದೂರು ನೀಡಿದ್ದು, ರಮೇಶ್ ಸಾವಿಗೆ ಸಹೊದ್ಯೋಗಿಯಾದ ಕಾನ್‌ಸ್ಟೇಬಲ್ ಮಹೇಶ್ ಎಂಬುವವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ.
ಕಾನ್‌ಸ್ಟೇಬಲ್ ಮಹೇಶ್, ರಮೇಶ್ ಅವರಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ತೀವ್ರ ಹಿಂಸೆ ನೀಡುತ್ತಿದ್ದರು. ಕೆಲಸದ ವಿಚಾರದಲ್ಲಿ ಹಾಗೂ ವೈಯಕ್ತಿಕವಾಗಿ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದರು. ಈ ಕಿರುಕುಳವನ್ನು ತಾಳಲಾರದೇ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.




