ಮಂಡ್ಯ: ರಾಜ್ಯದ ಸಚಿವರಿಗೆ ಮುಜುಗರ ಉಂಟುಮಾಡಲು ಕೇಂದ್ರ ಸಚಿವರೊಬ್ಬರು ಹಾಗೂ ಕರ್ನಾಟಕದ ಬಿಜೆಪಿ ನಾಯಕರೊಬ್ಬರು ಸ್ಟಿಂಗ್ ಆಪರೇಷನ್‌ಗೆ ಸಂಚು ರೂಪಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿ ಮೂಲದ ಏಜೆನ್ಸಿಯೊಂದಕ್ಕೆ ಸುಪಾರಿ ನೀಡಿ, ರಾಜ್ಯದ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಸಿಸಿಟಿವಿ ದೃಶ್ಯಗಳು, ಆಡಿಯೋ ಮತ್ತು ವಿಡಿಯೋ ದಾಖಲೆಗಳಿರುವ ಪೆನ್‌ಡ್ರೈವ್ ಪ್ರದರ್ಶಿಸಿರುವ ಗಣಿಗ ರವಿ, ಒಂದು ವಾರದೊಳಗೆ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸುವುದಾಗಿಯೂ ಹೇಳಿದ್ದಾರೆ.
ಗಣಿಗ ರವಿ ಅವರ ಈ ಆರೋಪಗಳು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿವೆ. ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಬಿಡುಗಡೆಯಾದ ಬಳಿಕ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.




