ಇ-ಸ್ವತ್ತು ಖಾತೆಗೆ ಲಂಚ ಪಡೆಯುತ್ತಿದ್ದ ವೇಳೆ ವಶ
ಭಾರತೀನಗರ: ಇ-ಸ್ವತ್ತು ಮಾಡಿಸಿಕೊಡಲು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತನಗರದ ಅಶ್ವಥ್ ಎಂಬವರು ಇ-ಖಾತಾ ಮಾಡಿಕೊಡಲು ಪಿಡಿಒ ದಯಾನಂದ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ನಂತರ ಅಶ್ವಥ್ ಅವರನ್ನು ಕರೆಸಿದ ಪಿಡಿಒ ೨೫ ಸಾವಿರ ರೂ. ಹಣ ನೀಡಬೇಕೆಂದು ಬೇಡಿಕೆಯಿಟ್ಟಿದ್ದರು.
ಅಶ್ವಥ್ ಅವರು ೨೫ ಸಾವಿರ ರೂ. ಕೊಡಲು ಒಪ್ಪಿ ಅದರಂತೆ ೧೩ ಸಾವಿರ ರೂ.ಗಳನ್ನು ಫೋನ್ ಪೇ ಮೂಲಕ ಪಾವತಿಸಿದ್ದರು. ಉಳಿದ ೧೨ ಸಾವಿರ ರೂ.ಗಳನ್ನು ಆನಂತರ ಕೊಡುವುದಾಗಿ ಹೇಳಿದ್ದ ಅಶ್ವಥ್ ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರು ಹೆಣೆದಿದ್ದ ಬಲೆಯ ಪ್ರಕಾರ ಉಳಿಕೆ ೧೨ ಸಾವಿರ ರೂ.ಗಳನ್ನು ಭಾರತೀನಗರದಲ್ಲಿ ನೀಡುವುದಾಗಿ ಅಶ್ವಥ್ ಪಿಡಿಒ ದಯಾನಂದ್ ಅವರನ್ನು ಭಾರತೀನಗರಕ್ಕೆ ಕರೆಸಿಕೊಂಡಿದ್ದರು.
೧೨ ಸಾವಿರ ರೂ.ಗಳನ್ನು ನೀಡುವಾಗ ಎಸ್‌ಪಿ ಸುರೇಶ್‌ಬಾಬು ಮಾರ್ಗದರ್ಶನದಲ್ಲಿ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಜಯರತ್ನಾ, ಸಿಬ್ಬಂದಿಗಳಾದ ಶರತ್, ದಿನೇಶ್, ನವೀನ್, ಶಂಕರ್, ರಾಮಲಿಂಗು, ಯೋಗೇಶ್ ಅವರು ದಯಾನಂದ್ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.