ಮಂಡ್ಯ : ಕಳೆದ ಹಲವು ತಿಂಗಳುಗಳಿಂದ ವೇತನ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿರುವ ನಗರದ ಮೈಷುಗರ್ ಶಾಲೆಯ ಶಿಕ್ಷಕರಿಗೆ ಲೋಕಸಭೆ ಸದಸ್ಯನಾಗಿ ತಮ್ಮ ಈವರೆಗಿನ ವೇತನವನ್ನು ಶಿಕ್ಷಕರ ಬಾಕಿ ವೇತನ ಪಾವತಿಸಲು ನೀಡುವುದಾಗಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು.
ನಗರದ ಮೈಷುಗರ್ ಶಾಲೆಯ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಿಎಸ್‌ಆರ್ ನಿಧಿಯಿಂದ ಅತ್ಯಾಧುನಿಕ ಶಾಲಾ ವಾಹನವನ್ನು ಮೈಷುಗರ್ ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರಿಸಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಶಿಕ್ಷಕರು ವೇತನವಿಲ್ಲದೆ ಕೆಲಸ ಮಾಡುತ್ತಿರುವುದು ಬಹಳ ನೋವಿನ ವಿಚಾರ. ಈವರೆಗೂ ಸುಮಾರು ೨೦ ಲಕ್ಷ ರೂ.ವೇತನ ಬಾಕಿ ಇದೆ. ಹೀಗಾಗಿ ನನ್ನ ವೇತನದ ಮೊತ್ತವನ್ನೇ ದೇಣಿಗೆಯಾಗಿ ನೀಡುತ್ತೇನೆ ಎಂದರು.
ನನ್ನ ಬಗ್ಗೆ ನಾಲಗೆ ಬಿಗಿ ಹಿಡಿದು ಮಾತನಾಡಲಿ
ಅನೇಕ ತಿಂಗಳುಗಳಿಂದ ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಾಗದಿರುವ ವ್ಯಕ್ತಿಗಳು ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ. ನಾನು ಈ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ೧೩ ತಿಂಗಳುಗಳಿಂದ ಶಿಕ್ಷಕರಿಗೆ ವೇತನ ನೀಡಿಲ್ಲ ಎನ್ನುವ ಮಾಹಿತಿ ಸಿಕ್ಕಿತು. ಸಿಎಸ್‌ಆರ್ ನಿಧಿಯಿಂದ ವೇತನ ಕೊಡುವ ಅವಕಾಶ ಇಲ್ಲ ಎಂದು ಸಚಿವರು ತಿಳಿಸಿದರು.
ನನ್ನ ಆನಾರೋಗ್ಯದ ಕಾರಣದಿಂದ ಜಿಲ್ಲೆಗೆ ಭೇಟಿ ನೀಡುವುದು ಕೊಂಚ ತಡವಾಯಿತು. ಆದರೂ ನನ್ನ ಕಚೇರಿಯ ತಂಡವನ್ನು ಕಳುಹಿಸಿ ಶಾಲೆಯ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಶಿಕ್ಷಕರ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದೆ. ಅದರಂತೆ ನನ್ನ ಕಚೇರಿ ಸಿಬ್ಬಂದಿ ಶಾಲೆಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಅದರ ಅನ್ವಯ ೧೦ ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಶಾಲೆಯ ಟ್ರಸ್ಟ್ ಸದಸ್ಯರ ಜತೆ ಚರ್ಚೆ ನಡೆಸಲಾಗಿದೆ. ಈ ೧೦ ಕೋಟಿ ರೂ.ಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:-ನವೆಂಬರ್ ಕ್ರಾಂತಿ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಮೈಷುಗರ್ ಶಾಲೆಯ ಅಭಿವೃದ್ಧಿ ಬಗ್ಗೆ ಶಾಲೆಯ ಟ್ರಸ್ಟ್‌ನವರು ಈವರೆಗೂ ನನ್ನೊಂದಿಗೆ ಒಂದು ಸಭೆಯನ್ನೂ ನಡೆಸಿಲ್ಲ. ಆ ಟ್ರಸ್ಟ್‌ನಲ್ಲಿ ಯಾರಿದ್ದಾರೆ ಎಂಬ ಮಾಹಿತಿಯೂ ಇಲ್ಲ. ಸಂಸದನಾಗಿ ನಾನು ಕೂಡ ಒಬ್ಬ ಟ್ರಸ್ಟಿ ಇದ್ದೇನೆ. ಶಿಕ್ಷಕರಿಗೆ ಇಷ್ಟು ದೊಡ್ಡ ಮೊತ್ತದ ವೇತನ ಬಾಕಿ ಇಟ್ಟುಕೊಂಡು ಕೆಲವರು ನನ್ನ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ ಎಂದು ಸಚಿವರು ಕಿಡಿಕಾರಿದರು.
ನನ್ನ ವೇತನದ ಹಣವನ್ನು ಶಿಕ್ಷಕರಿಗೆ ಕೊಡುತ್ತಿದ್ದೇನೆ. ಇದು ಪಾಪದ ಹಣವಲ್ಲ. ವರ್ಗಾವಣೆಯಿಂದ ಹೊಡೆದುಕೊಂಡ ಹಣವಲ್ಲ. ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ತಿರುಗೇಟು ನೀಡಿದರು.
ಶಾಲೆಯ ಟ್ರಸ್ಟ್‌ನವರು ಜವಾಬ್ದಾರಿ ತೆಗೆದುಕೊಂಡರೆ ಹಂತ ಹಂತವಾಗಿ ಸರ್ವ ರೀತಿಯಲ್ಲೂ ಶಾಲೆಯ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಶಾಲೆಯ ಬಗ್ಗೆ ನಾನು ಟ್ರಸ್ಟ್ ಸದಸ್ಯರನ್ನು ಬಿಟ್ಟು ಬೇರೆಯವರ ಜತೆ ಚರ್ಚಿಸಲು ತಯಾರಿಲ್ಲ. ಏಕೆಂದರೆ, ಈ ವಿಷಯದಲ್ಲಿ ರಾಜಕೀಯ ತರುವುದು ಅನಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳ ಜೊತೆಗೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಜಿ.ಬಿ.ಶಿವಕುಮಾರ್, ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್,ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ, ಶಾಲಾ ಸಿಬ್ಬಂದಿ, ಟ್ರಸ್ಟ್ ಸದಸ್ಯರು ಹಾಜರಿದ್ದರು.





