ಕಿಕ್ಕೇರಿ : ಇಲ್ಲಿಗೆ ಸಮೀಪದ ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇವನಹಳ್ಳಿ ಅಮಾನಿಕೆರೆಯನ್ನು ನರೇಗಾ ಯೋಜನೆಯಡಿ 100ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಹೂಳೆತ್ತುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ವಿನಾ ಕಾರಣ ಮಹಿಳಾ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕೂಲಿಕಾರರು ಪ್ರತಿಭಟನೆ ನಡೆಸಿದರು.
ಮಂದಗರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬೇವನಹಳ್ಳಿ, ಶ್ರವಣಹಳ್ಳಿ, ಚಿಕ್ಕಮಂದಗರೆ, ಅಲೇನಹಳ್ಳಿ ಗ್ರಾಮಗಳ ಕೂಲಿ ಕಾರ್ಮಿಕರು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಬೇವನಹಳ್ಳಿ ಅಮಾನಿಕೆರೆ ಹೂಳೆತ್ತವ ಅಭಿವೃದ್ಧಿ ಕೆಲಸ ಮಾಡುತ್ತಿದ್ದು, ಸ್ಥಳೀಯ ಕೆಲ ಕಿಡಿಗೇಡಿಗಳು ಪದೇ ಪದೇ ಕೆಲಸ ಮಾಡದಂತೆ ತಡೆಯೊಡ್ಡಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ನಾಲ್ವರ ವಿರುದ್ಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಕೂಲಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
ಬಳಿಕ ಕರ್ನಾಟಕ ಪ್ರಾಂತ್ಯ ಕೂಲಿ ಕಾರ್ಮಿಕರ ಸಂಘದ ತಾಲ್ಲೂಕು ಕಾರ್ಯದರ್ಶಿ ಗೋಪಾಲ್ ಮತ್ತು ಮುಖಂಡರಾದ ಚಿಕ್ಕಮಂದಗರೆ ಸುರೇಶ್ ಮಾತನಾಡಿ, ಕೂಲಿ ಕಾರ್ಮಿಕರು ಕಾರ್ಯನಿರ್ವಹಿಸಿದರೆ ನಮಗೆ ಕೆಲಸ ಇಲ್ಲದಂತಾಗುತ್ತದೆ ಎಂದು ಯಂತ್ರೋಪಕರಣಗಳಲ್ಲಿ ಕೆಲಸ ಮಾಡುವ ಬಲಾಢ್ಯರ ಕುಮ್ಮಕ್ಕಿನಿಂದ ನಮ್ಮ ಕೂಲಿ ಕಾರ್ಮಿಕರಿಗೆ ಇಲ್ಲ ಸಲ್ಲದ ತೊಂದರೆ ನೀಡುತ್ತಿದ್ದಾರೆ. ಇವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಕೂಲಿ ಕಾರ್ಮಿಕರಾದ ಪವಿತ್ರ, ನೀಲಮ್ಮ, ನಟರಾಜು, ಅನಿತ, ರಾಣಿ, ಕಾಂತಾಮಣಿ, ಕಾವ್ಯ, ರಾಧಾ, ಪಾರ್ವತಮ್ಮ, ಸಾಕಮ್ಮ, ಗಿಡ್ಡಮ್ಮ, ಲಕ್ಷ್ಮಮ್ಮ, ಯಶೋಧಮ್ಮ, ಪುಟ್ಟಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





