ಮೈಸೂರು ವಿ.ವಿ ಪರಿನಿಯಮಾವಳಿಯಂತೆ ಪ್ರಾರಂಭ
ಮಂಡ್ಯ : ಮಂಡ್ಯ ವಿಶ್ವವಿದ್ಯಾಲಯದಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನಿಂದ ತಾಂತ್ರಿಕ ಹಾಗೂ ನಿರ್ವಹಣಾ ಶಾಸ್ತ್ರಗಳಿಗೆ ಸಂಬಂಧಿಸಿದಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯಿಂದ ಅನುಮೋದನೆ ಪಡೆದು ಎಂ.ಸಿ.ಎ. ಮತ್ತು ಎಂ.ಬಿ.ಎ. ಸ್ನಾತಕೋತ್ತರ ಪದವಿ ಆರಂಭಿಸಲಾಗುತ್ತಿದೆ ಎಂದು ವಿವಿಯ ಉಪ ಕುಲಪತಿ ಪ್ರೊ. ಶಿವಚಿತ್ತಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ವಿವಿಯು ಯಾವುದೇ ಪದವಿಯನ್ನು ಸ್ವತಃ ಪ್ರಾರಂಭಿಸಬಹುದಾಗಿದ್ದು, ಎಐಸಿಟಿಇ (ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್) ಅನುಮೋದನೆಯೊಂದಿಗೆ ಮೈಸೂರು ವಿವಿಯ ಪರಿನಿಯಮಾವಳಿಯಂತೆ ಪ್ರಾರಂಭಿಸಲಾಗುತ್ತಿದೆ. ಜಿಲ್ಲೆಯ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಮುಂದಾಗಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜೂ.೨೯ರಂದು ಎಂ.ಸಿ.ಎ. ಮತ್ತು ಎಂ.ಬಿ.ಎ. ಪದವಿಗಳ ಆರಂಭಕ್ಕೆ ಅನುಮೋದನೆ ದೊರೆತಿದ್ದು, ಬಿಎಸ್ಸಿ ಕಂಪ್ಯೂಟರ್ ಸೈನ್ಸ್, ಎಂಎಸ್ಸಿ ಮಾಡಿದವರು ಎಂಸಿಎ ಪದವಿಯ ಪ್ರವೇಶ ಪಡೆಯಬಹುದಾಗಿದೆ. ಬಿ.ಕಾಂ, ಬಿ.ಬಿ.ಎ. ಸೇರಿದಂತೆ ಯಾವುದೇ ಪದವಿ ಪಡೆದವರು ಎಂ.ಬಿ.ಎ. ಪದವಿಗೆ ಪ್ರವೇಶಾತಿ ಪಡೆಯಬಹುದಾಗಿದೆ ಎಂದು ಹೇಳಿದರು.
ಎಂ.ಬಿ.ಎ. ಪದವಿ ಪಡೆಯಲು ರಾಜ್ಯದವರಿಗೆ ೭೫ ಸಾವಿರ ರೂ., ಹೊರ ರಾಜ್ಯದವರಿಗೆ ೧,೧೨,೦೦೦ ರೂ. ಶುಲ್ಕವಿದ್ದು, ಎಂ.ಸಿ.ಎ. ಪದವಿಗೆ ರಾಜ್ಯದವರಿಗೆ ೪೯,೫೧೨ ರೂ. ಹಾಗೂ ಹೊರ ರಾಜ್ಯದವರಿಗೆ ೭೫,೯೩೦ ರೂ. ಶುಲ್ಕವಿದೆ. ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ೨೩,೬೭೮ ರೂ. ವಿನಾಯಿತಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಯೋಗನರಸಿಂಹಾಚಾರಿ, ಸಿಂಡಿಕೇಟ್ ನಾಮನಿರ್ದೇಶಿತ ಸದಸ್ಯ ನಾಗರಾಜ್, ಸಿಂಡಿಕೇಟ್ ಸದಸ್ಯ ಡಾ. ಎಸ್.ಎಲ್.ಸುರೇಶ್, ಬೋಧಕರಾದ ಪ್ರೊ.ದಿಲ್ಷಾದ್ ಬೇಗಂ, ಡಾ.ಪ್ರೇಮ್‌ಸಿಂಗ್, ಉದ್ಯೋಗ ಸಂಯೋಜಕ ಎಂ.ಸಿ.ಗಿರೀಶ್ ಹಾಜರಿದ್ದರು.





