Mysore
25
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮಂಡ್ಯ | ಜಮೀನುಗಳಿಗೆ ನುಗ್ಗಿದ ನೀರು: ಬೆಳೆ ನಷ್ಟದ ಆತಂಕದಲ್ಲಿ ರೈತರು

ಮಂಡ್ಯ : ವಿಶ್ವೇಶ್ವರಯ್ಯ ನಾಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಏರಿ ಮೇಲಿನಿಂದ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ದೊಡ್ಡಗರುಡನಹಳ್ಳಿ ಗ್ರಾಮದ ಬಳಿ ರೈತರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ದೊಡ್ಡಗರುಡನಹಳ್ಳಿ ಬಳಿಯ ವಿಶ್ವೇಶ್ವರಯ್ಯ ನಾಲೆಯ ಕೊಪ್ಪ ವಿಭಾಗಕ್ಕೆ ಹರಿಯುವ ನಾಲೆ ಬಳಿ ಜಮಾಯಿಸಿದ ರೈತರು, ನೀರಾವರಿ ಇಲಾಖೆ ಅಽಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹೂಳು ತುಂಬಿರುವುದರಿಂದ ನಾಲೆಯಲ್ಲಿ ಹರಿಯುತ್ತಿರುವ ನೀರು ಏರಿ ಮೇಲೆ ಹರಿದು ಜಮೀನುಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ರೈತರ ಬೆಳೆ ನಾಶವಾಗುವುದರ ಜೊತೆಗೆ ಹೊಲ-ಗದ್ದೆಗಳಿಗೆ ತೆರಳಲು ಕಷ್ಟಸಾಧ್ಯವಾಗುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:-ಚಾ.ನಗರ | ಇತಿಹಾಸ ಅರಿಯದವರಿಂದ ದಸರಾ ರದ್ದು ; ಸಾಹಿತಿ ಸೋಮಶೇಖರ್‌ ಬಿಸಲ್ವಾಡಿ

ಈ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರ ವಿದ್ಯಾಧರ್ ಮತ್ತು ನೀರುಗಂಟಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಅಧಿಕಾರಿಗಳ ನಿರ್ಲಕ್ಷ ದಿಂದಾಗಿ ನಾಲಾ ಏರಿಮೇಲೆ ಹೆಚ್ಚುವರಿ ನೀರು ಹರಿಯುತ್ತಿರುವುದರಿಂದಾಗಿ ಕಾಲುವೆ ಕೋಡಿ ರಸ್ತೆ ಹಾಳಾಗುತ್ತಿದೆ. ದೊಡ್ಡಗರುಡನಹಳ್ಳಿ ಬಳಿ ಮಂಡ್ಯ-ನಾಗಮಂಗಲ ರಸ್ತೆಯ ಮೇಲೂ ನೀರು ಹರಿಯುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದನ್ನು ತಡೆಗಟ್ಟಲು ಮುಂದಾಗಲಿಲ್ಲ ಎಂದು ಕಿಡಿಕಾರಿದರು.

ತಕ್ಷಣ ಇದನ್ನು ಸರಿಪಡಿಸಿ ನಾಲೆಯಲ್ಲಿರುವ ಹೂಳು ತೆಗೆಸಬೇಕು. ಕೊನೇ ಭಾಗದ ರೈತರಿಗೆ ನೀರನ್ನೂ ಕೊಡುವುದರ ಜೊತೆಗೆ ನಾಲಾ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗದಂತೆ ಎಚ್ಚರ ವಹಿಸಬೇಕು. ತಪ್ಪಿದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಪಟೇಲ್ ಆನಂದ್, ಚನ್ನಕೇಶವ, ಮರೀಗೌಡ, ಶಾಮಿಯಾನ ಆನಂದ್, ಗ್ರಾ.ಪಂ. ಸದಸ್ಯ ಕುಮಾರ್, ಕೆಂಪೇಗೌಡ, ರುದ್ರೇಶ, ಪುಟ್ಟಸ್ವಾಮಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Tags:
error: Content is protected !!