ಮಂಡ್ಯ: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳು ಹಾಗೂ ಹಾಸ್ಟೆಲ್ ಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪ್ರತಿ ತಿಂಗಳು 5 ನೇ ತಾರೀಖಿನೊಳಗೆ ಸಂಬಳ ಪಾವತಿಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಸೂಚಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಹಾಸ್ಟೆಲ್ ಹಾಗೂ ಕಾಲೇಜುಗಳ ಹೊರಗುತ್ತಿಗೆ ಸಿಬ್ಬಂದಿಗಳ ಕುಂದು ಕೊರತೆ ಸಭೆ ನಡೆಸಿ ಮಾತನಾಡಿದರು.
ಹೊರಗುತ್ತಿಗೆ ಟೆಂಡರ್ ಪಡೆದಿರುವ ಏಜೆನ್ಸಿಗಳು ಇಲಾಖೆಗಳಿಂದ ಬಿಲ್ ಪಾವತಿಯಾದ ನಂತರ ಸಂಬಳ ಪಾವತಿ ಮಾಡುವುದಲ್ಲ, 5 ನೇ ತಾರೀಖು ಅವರಿಗೆ ವೇತನ ಪಾವತಿ ಮಾಡುವುದು. ಟೆಂಡರ್ ನಲ್ಲೇ ಈ ಷರತ್ತು ಇರುತ್ತದೆ ಎಂದರು.
ಇಲಾಖೆಗಳು ಏಜೆನ್ಸಿಗಳಿಗೆ ಬಿಲ್ ಪಾವತಿ ಮಾಡುವ ಮೊದಲು ಸಿಬ್ಬಂದಿಗಳಿಗೆ ಇ.ಎಸ್.ಐ, ಪಿ.ಎಫ್ ಪಾವತಿ ಮಾಡಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು ಹಾಗೂ ದಾಖಲಾತಿಗಳನ್ನು ಪಡೆದುಕೊಳ್ಳಬೇಕು ಎಂದರು.
ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಏಜೆನ್ಸಿ ಅವರು ವೇತನ ಸಂದಾಯ ರಶೀದಿ ನೀಡಬೇಕು. ವಸತಿ ನಿಲಯಗಳ ಮೇಲ್ವಿಚಾರಕರು ತಮ್ಮ ವ್ಯಾಪ್ತಿಗೆ ಬರುವ ಸಿಬ್ಬಂದಿಗಳಿಗೆ ವೇತನ ಪಾವತಿಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಿ ಇದರಿಂದ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ ಎಂದರು.
ವಸತಿನಿಲಯಗಳಲ್ಲಿ ಅಡುಗೆ ಸಿಬ್ಬಂದಿಗಳಿಗೆ ಅಡುಗೆ ತಯಾರು ಮಾಡುವ ಪರಿಕರಗಳಾದ ಚಪಾತಿ ಒತ್ತುವ ಯಂತ್ರ, ರುಬ್ಬುವ ಯಂತ್ರ ಇತ್ಯದಿಗಳನ್ನು ಸರ್ಕರ ನಿಗದಿಪಡಿಸಿರುವ ನಿಯಮದಂತರ ಒದಗಿಸಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿ. ವಿದ್ಯಾರ್ಥಿಗಳು ಸೇವಿಸುವ ಪರಿಮಾಣದಲ್ಲಿ ಶುಚಿ, ರುಚಿ ಹಾಗೂ ಬಿಸಿಯಾದ ಆಹಾರ ನೀಡಿ. ಆಹಾರವನ್ನು ವ್ಯರ್ಥ ಮಾಡಬೇಡಿ ಎಂದರು.
ಹೊರಗುತ್ತಿಗೆ ಸೇವೆ ನೀಡುವ ಏಜೆನ್ಸಿಗಳು ನಿಯಮದಂತೆ ಕಾರ್ಯನಿರ್ವಹಿಸದಿದ್ದಲ್ಲಿ ಅವರಿಗೆ ನೋಟೀಸ್ ನೀಡಿ, ಅಮಾನತ್ತು ಮಾಡಿ ಕಪ್ಪುಪಟ್ಟಿಗೆ ಸೇರಿಸಿ ಎಂದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ ಸಿದ್ದಲಿಂಗೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೃಷ್ಣ ಕುಮಾರ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಧುಶ್ರೀ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.