ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ ಭವನ ಮಾರಾಟಕ್ಕಿದೆ ಎಂದು ಹೇಳಿಲ್ಲ, ಸರ್ಕಾರ ಇಲಾಖೆಗೆ ವಹಿಸಿಕೊಟ್ಟು, ನಗರದ ಹೃದಯ ಭಾಗದಲ್ಲಿ ಹೊಸ ಭವನ ನಿರ್ಮಾಣ ಕ್ರಮ ವಹಿಸಲಾಗುವುದು ಎಂದು ಹೇಳಿದ್ದೆನೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಪ್ರೊ.ಎಚ್.ಎಸ್.ಮುದ್ದೇಗೌಡ ಸ್ಪಷ್ಟ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ೨೦೦೮ರಲ್ಲಿ ಅಧ್ಯಕ್ಷನಾಗಿದ್ದಾಗ ಅಂದಿನ ಮಂಡ್ಯ ಜಿಲ್ಲಾಧಿಕಾರಿ ಡಾ.ಜಾಫರ್ ಅವರಿಗೆ ಹೊಸ ಭವನ ನಿರ್ಮಾಣಕ್ಕೆ ಮನವಿ ನೀಡಲಾಗಿದ್ದು, ಸ್ಥಳ ಹುಡುಕಿ ಎಂದು ಹೇಳಿದ್ದರು. ಅಂದಿನ ರಾಜ್ಯಾಧ್ಯಕ್ಷ ನಲ್ಲೂರು ಪ್ರಸಾದ್ ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದರು. ಆಗಿನ ಅವಧಿಯಲ್ಲಿ ಮಾರಾಟಕ್ಕೆ ಆಲೋಚನೆ ಮಾಡಿದ್ದು, ಕಾಲಕೂಡಿ ಬರಲಿಲ್ಲ ಎಂದರು.
ಪತ್ರಿಕೆಗಳಲ್ಲಿ ಮಾರಾಟ ಮಾಡುವುದಾಗಿ ತಿಳಿಸಲಾಗಿದ್ದು, ಈ ವಿಷಯದ ಸಲುವಾಗಿ ಜಿಲ್ಲಾಧಿಕಾರಿಗಳಿಗಾಗಲೀ, ಜಿಲ್ಲಾ ಉಸ್ತುವಾರಿ ಸಚಿವರ ಗಮನದಲ್ಲಾಗಲಿ ಇಲ್ಲ ಎನ್ನುತ್ತಿದ್ದಂತೆ ಪತ್ರಕರ್ತರು ಮುದ್ದೇಗೌಡರು ಹೇಳಿದ್ದನ್ನು ಮನವರಿಕೆ ಮಾಡಿದ ನಂತರ ಮಾತಿನ ಭರದಲ್ಲಿ ಹೇಳಿದ್ದೇನೆ ಎಂದು ಒಪ್ಪಿಕೊಂಡರು.
ಕನ್ನಡ ಭವನ ಮಾರಾಟ ಮಾಡುವುದಿಲ್ಲ, ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ತೆಗೆದುಕೊಳ್ಳುವ ತೀರ್ಮಾನದ ಆಧಾರದ ಮೇಲೆ ನಿರ್ಣಯ ಕೈಗೊಳ್ಳಲಾಗುವುದು. ನಗರದ ಮಧ್ಯೆ ತಂದು ಉನ್ನತ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ಭವನವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಸಾಹಿತಿ ಕೃಷ್ಣ ಸ್ವರ್ಣಸಂದ್ರ ಇದ್ದರು.





