ಮಂಡ್ಯ : ಜಿಲ್ಲೆಯಲ್ಲಿ ಕೋಮು ಸೌಹಾರ್ಧತೆ ಕದಡುವಂತಹ ಕೃತ್ಯಗಳನ್ನು ನಿಯಂತ್ರಿಸಲು ಮಂಗಳೂರು ಮಾದರಿಯಲ್ಲಿ ‘ಕೋಮು ಹಿಂಸೆ ನಿಗ್ರಹ ಪಡೆ’ ಆರಂಭಿಸುವಂತೆ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.
ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಕೋಮು ಸಂಘರ್ಷಗಳಿಗೆ ಎಡೆ ಮಾಡಿಕೊಡುವ ಪ್ರಯೋಗಗಳು ನಡೆಯುತ್ತಿವೆ. ಬಿಜೆಪಿ, ಸಂಘ ಪರಿವಾರ ಹಾಗೂ ಹಿಂದೂ ಸಂಘಟನೆಗಳು ಕೋಮು ವಿಷಬೀಜ ಬಿತ್ತಿ, ಜಿಲ್ಲೆಯಲ್ಲಿ ನೆಲೆ ನಿಲ್ಲುವ ಪ್ರಯತ್ನ ನಡೆಸುತ್ತಿವೆ. ಇದಕ್ಕೆ ಸರ್ಕಾರ ಈಗಲೇ ಕಠಿಣ ಕ್ರಮ ಕೈಗೊಂಡು ಪೂರ್ಣ ವಿರಾಮ ಹಾಕಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮದ್ದೂರು ಕಲ್ಲು ತೂರಾಟ ಪ್ರಕರಣ ನಡೆದಿರುವುದು ಖಂಡನಾರ್ಹ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆಯ ನಂತರ ಕರ್ಫ್ಯೂ ಇದ್ದರೂ ಕಾನೂನು ಮೀರಿ ಪ್ರತಿಭಟನೆ ನಡೆಸಿದವರು ಹಾಗೂ ರಾಮ್‌ರಹೀಂ ನಗರದ ಮಸೀದಿಗೆ ನುಗ್ಗುತ್ತೇವೆ ಎಂದವರನ್ನು ಬಂಽಸಬೇಕು ಎಂದು ಆಗ್ರಹಿಸಿದರು.
ಈ ಬಾರಿ ನಾಗಮಂಗಲದಲ್ಲಿ ಕ್ರಮಕೈಗೊಂಡ ರೀತಿ ಎಚ್ಚರ ವಹಿಸಿದ್ದರೆ, ಮದ್ದೂರಲ್ಲಿ ಗಲಭೆ ನಡೆಯುತ್ತಿರಲಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿ, ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಘಟನೆಯ ಹೊಣೆ ಹೊರಬೇಕು ಎಂದು ಹೇಳಿದರು.
ರಾಜ್ಯಲ್ಲಿ ಕಾಂಗ್ರೆಸ್ ಒಂದು ಸಮುದಾಯವನ್ನು ಓಲೈಸುವ ವಿಕೃತ ಮನಸ್ಥಿತಿಯನ್ನು ಹೊಂದಿದೆ. ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜಿ.ಹಳ್ಳಿ, ಮೈಸೂರಿನ ಉದಯಗಿರಿ ಗಲಭೆ ಪ್ರಕರಣಗಳಲ್ಲಿ ಬಂಧಿತರ ಮೇಲಿನ ಪ್ರಕರಣಗಳನ್ನು ಖುಲಾಸೆ ಮಾಡಿರುವುದು ಸರಿಯಲ್ಲ. ಒಂದು ಸಮುದಾಯದ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿರುವುದು ರಾಜ್ಯದಲ್ಲಿ ಕುಕೃತ್ಯಗಳಿಗೆ ಪ್ರಚೋದನೆ ನೀಡಿದಂತಾಗಿದೆ ಎಂದು ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್, ಮದ್ದೂರು ತಾಲ್ಲೂಕು ಅಧ್ಯಕ್ಷ ಶಂಕರ್, ಮಳವಳ್ಳಿ ತಾಲ್ಲೂಕು ಅಧ್ಯಕ್ಷ ವಿ.ನಂಜುಂಡಸ್ವಾಮಿ, ಬಸವರಾಜು, ದೇವರಾಜು ಇತರರು ಹಾಜರಿದ್ದರು.





