Mysore
19
few clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

ಮಂಡ್ಯ | ಜಾತಿ ಸಮೀಕ್ಷೆ : ಯಶಸ್ವಿಗೆ ಮುಖಂಡರು ಸಹಕರಿಸಿ ; ಜಿಲ್ಲಾಧಿಕಾರಿ ಮನವಿ

ಮಂಡ್ಯ : ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯಲ್ಲಿ ಸೆಪ್ಟೆಂಬರ್‌ 22 ರಿಂದ ಅಕ್ಟೋಬರ್ 7 ವರೆಗೆ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ, ಯಶಸ್ವಿಗೊಳಿಸಲು ಸಮುದಾಯ ಮುಖಂಡರು ಸಾರ್ವಜನಿಕರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದರು.

ಅವರು ಇಂದು ಜಿಲ್ಲಾಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಸಮುದಾಯ ಮುಖಂಡರೊಂದಿಗೆ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯಾದ್ಯಂತ ನಾಗರೀಕರ ಸ್ಥಿತಿ-ಗತಿ, ಅಗತ್ಯತೆ, ಬೇಡಿಕೆ ತಿಳಿಯಲು ಹಾಗೂ ಅವರ ಪರವಾಗಿ ಯೋಜನೆಗಳನ್ನು ರೂಪಿಸಲು ಅಂಕಿ-ಅಂಶ ಸಂಗ್ರಹಿಸುವ ಸಲುವಾಗಿ ಜಿಲ್ಲೆಯಲ್ಲಿ ಸಮೀಕ್ಷೆ ಕೈಗೊಂಡಿದ್ದು, ಸಾಧ್ಯವಾದಷ್ಟು ಸಮೀಕ್ಷೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ ಎಂದರು.

ಒಂದು ಕುಟುಂಬ ಮತ್ತು ವ್ಯಕ್ತಿಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಇದಾಗಿದ್ದು, ಸಮೀಕ್ಷೆಯಲ್ಲಿ ಕೆಲವು ವಯಕ್ತಿಕ ಹಾಗೂ ಕುಟುಂಬ ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಧನಾತ್ಮಕವಾಗಿ ಸಹಕರಿಸಲು ಜನರಲ್ಲಿ ತಿಳಿಸಿ ಎಂದರು.

ಈಗಾಗಲೇ ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಂಸ್ಥೆಗಳ ಕಸ ವಿಲೇವಾರಿ ವಾಹನಗಳಲ್ಲಿ ಜಿಂಗಲ್ಸ್ , ಮತ್ತು ಬ್ಯಾನರ್ ಗಳನ್ನು ಅಳವಡಿಸುವ ಮೂಲಕ ಸಮೀಕ್ಷೆ ಕುರಿತು ಪ್ರಚಾರ ಕೈಗೊಂಡಿದ್ದು, ಅರಿವು ಮತ್ತು ಜಾಗೃತಿ ಮೂಡಿಸಲು ಸಮುದಾಯದ ಮುಖ್ಯಸ್ಥರ ಪಾತ್ರವು ದೊಡ್ಡದಾಗಿದ್ದು ಸಮೀಕ್ಷೆ ಕುರಿತು ಹೆಚ್ಚು ಪ್ರಚಾರ ಪಡಿಸಿ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿ ಮಾತನಾಡಿ, ಈಗಾಗಲೇ ಗಣತಿದಾರರಿಗೆ ಸಮೀಕ್ಷೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿದೆ. ಗಣತಿದಾರರು ತರಬೇತಿಯಲ್ಲಿ ನೀಡಲಾಹಿರುವ ಮಾರ್ಗದರ್ಶದಂತೆ ಸಮೀಕ್ಷೆ ನಡೆಸಲಿದ್ದಾರೆ. ಸಮಯ ಕಡಿಮೆಯಿದ್ದು, ಸಾರ್ವಜನಿಕರಿಗೆ ಸಮೀಕ್ಷೆ ಕುರಿತು ಮಾಹಿತಿ ನೀಡುವುದು ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಿದ್ದು, ಸಮೀಕ್ಷೆ ಯಶಸ್ವಿಗೊಳಿಸಲು ಜನರಲ್ಲಿ ಜಾಗೃತಿ ಮೂಡಿಸಿ ಸಹಕರಿಸಿ ಎಂದರು.

ದಸರಾ ಮತ್ತು ಇತರೆ ಹಬ್ಬಗಳ ಆಚರಣೆಯ ಸಮಯವಾದ್ದರಿಂದ ಹಾಗೂ ರಜಾದ ಸಮಯವೂ ಆಗಿರುವುದರಿಂದ ಸಮೀಕ್ಷೆ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಅವರ ಮನೆಯಲ್ಲಿ ಇರುವಂತೆ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ತಲುಪಿಸಿರುವ ಪ್ರಶ್ನಾವಳಿಯ ಬಗ್ಗೆ ಮಾಹಿತಿ ಹೊಂದಿರಲು ಸಾರ್ವಜನಿಕರಿಗೆ ತಿಳಿಸಿ ಎಂದರು.

ಸಮುದಾಯದ ಮುಖಂಡರುಗಳು ಮಾತನಾಡಿ ಸಮೀಕ್ಷೆಯ ದಿನವನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ತಿಳಿಸಿದರೆ ಕುಟುಂಬದ ಸದಸ್ಯರು ಮನೆಯಲ್ಲಿರಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ಗಣತಿದಾರರು ಸಂಪೂರ್ಣ ಪ್ರಶ್ನೆಗಳನ್ನು ಕೇಳುವುದಿಲ್ಲ, ಪ್ರಶ್ನಾವಳಿಯಲ್ಲಿರುವ ಎಲ್ಲಾ ಪ್ರಶ್ನೆಗಳನ್ನು ಕೇಳಿ ಉತ್ತರಪಡೆಯಲು ಹಾಗೂ ಸಾರ್ವಜನಿಕರೊಂದಿಗೆ ಸ್ನೇಹದಿಂದ ವರ್ತಿಸಲು ತಿಳಿಸಿ ಎಂದರು.

ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಹಳ್ಳಿಗಳಲ್ಲಿ ಹಳ್ಳಿಯ ಸಂಪ್ರದಾಯದಂತೆ ಟಾಂ ಟಾಂ ಮೂಲಕ ಸಮೀಕ್ಷೆ ಕುರಿತು ಪ್ರಚಾರ ನೀಡಿ ಹಾಗೂ ಸಮೀಕ್ಷೆಯ ದಿನದಂದು ಕುಟುಂಬಸ್ಥರು ಮನೆಯಲ್ಲಿರುವಂತೆ ಸಾರಿ ಹೇಳಲು ತಿಳಿಸಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳ ಹಾಗೂ ವಿವಿಧ ಸಮುದಾಯದ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು

Tags:
error: Content is protected !!