Mysore
29
scattered clouds
Light
Dark

ಮಂಡ್ಯ:ಸಚಿವ ಎಂ.ಬಿ ಪಾಟೀಲ್‌ ಬಹಿರಂಗ ಕ್ಷಮೆಯಾಚಿಸಲು ಬಿಜೆಪಿ ಎಸ್‌ಸಿ ಮೋರ್ಚ ಆಗ್ರಹ

ಮಂಡ್ಯ : ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಸಚಿವ ಎಂಬಿ ಪಾಟೀಲ್ ಅವರು ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಭಾರತೀಯ ಜನತಾ ಪಕ್ಷದ ಎಸ್ ಸಿ ಮೋರ್ಚ ರಾಜ್ಯ ಕಾರ್ಯದರ್ಶಿ ಎಂ ಎಸ್ ಪರಮಾನಂದ ಆಗ್ರಹಿಸಿದ್ದಾರೆ.

ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ನಿರ್ಭೀತಿಯಿಂದ ನೇರಾನೇರ ಪ್ರಶ್ನಿಸುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಎಂಬಿ ಪಾಟೀಲ್ ಅವರು ಅಪಮಾನಕರವಾಗಿ ನಿಂದನೆ ಮಾಡುತ್ತಿರುವುದು ಖಂಡನೀಯ ಎಂದರು.

ಈ ಹಿಂದೆ ಕೆ ಐ ಎ ಡಿ ಬಿ ವತಿಯಿಂದ ಸೈಟನ್ನು ಅಲಾಟ್ ಮಾಡಲಾಗಿದೆ. ಸಿ ಎ ಸೈಟ್ ಪಡೆಯಲು 283 ಅರ್ಜಿ ಹೋಗಿದ್ದು ,ಆದರೆ ತರಾತುರಿಯಲ್ಲಿ ಒಂದು ತಿಂಗಳೊಳಗೆ 193 ಸೈಟುಗಳನ್ನು ವಿತರಿಸಲಾಗಿದೆ ಎಂದು ದೂರಿದರು.

ಈ ಬಗ್ಗೆ ನಾರಾಯಣಸ್ವಾಮಿ ಅವರು ತನಿಖೆಗೆ ಒತ್ತಾಯಿಸಿದ್ದಾರೆ. ಆದರೆ ಇದನ್ನೇ ಮುಂದಿಟ್ಟುಕೊಂಡು ಅವಮಾನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ದಲಿತ ,ವಂಚಿತ ಮತ್ತು ಪೀಡಿತ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಬದಲು ದಲಿತರ ಹೆಸರಿನಲ್ಲಿ ಸರ್ವವನ್ನು ಬಾಚಿಕೊಂಡು ತಮ್ಮ ಕುಟುಂಬ ಭದ್ರ ಪಡಿಸಿಕೊಳ್ಳುವ ಖರ್ಗೆ ಕುಟುಂಬಕ್ಕೂ ನ್ಯೂನ್ಯತೆಗಳನ್ನು ಎತ್ತಿ ಹಿಡಿದು ತಳ ಸಮುದಾಯಗಳಿಗೆ ನ್ಯಾಯ ಕೊಡಿಸಲು ಹೋರಾಡುತ್ತಿರುವ ಚಲವಾದಿ ನಾರಾಯಣಸ್ವಾಮಿ ಅವರಿಗೂ ಯಾವ ಹೋಲಿಕೆ ಇದೆ ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರದ ವಿರುದ್ಧ ಸೊಲ್ಲೆತ್ತಿದರೆ ಭ್ರಷ್ಟರೆಲ್ಲ ಸೇರಿ ನಾರಾಯಣಸ್ವಾಮಿ ಅವರನ್ನು ಕೀಳು ಮಟ್ಟದ ಭಾಷೆ ಬಳಸಿ ನಿಂದಿಸುತ್ತಿದ್ದಾರೆ. ತಪ್ಪೇ ಮಾಡದೆ ನ್ಯಾಯದ ಪರವಾಗಿರುವ ಅವರನ್ನು ಅಪಮಾನಿಸಿ ತೇಜೊವಧೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಸಚಿವ ಎಂ ಬಿ ಪಾಟೀಲ್ ಅವರು ನಾರಾಯಣಸ್ವಾಮಿ ಅವರನ್ನು ಶೆಡ್ ಗಿರಾಕಿ ಎಂದು ಟೀಕಿಸಿದ್ದಾರೆ. ಆದರೆ ಎಂಬಿ ಪಾಟೀಲ್ ಅವರೇ ಲೊಡ್ದು ಗಿರಾಕಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೂಡಲೇ ಸಚಿವ ಎಂಬಿ ಪಾಟೀಲ್ ಅವರು ನಾರಾಯಣಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಟಿ ಜಿ ಶಂಕರ್, ಜಿಲ್ಲಾ ವಕ್ತಾರ ಸಿಟಿ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂಎಸ್ ಧರಣಿಂದ್ರ, ಕೆಆರ್ ನಿತ್ಯಾನಂದ ,ಜಿಡಿ ಯೋಗೇಶ್ ಸೇರಿದಂತೆ ಇತರರಿದ್ದರು.