ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ನಡೆಯಲು ಗೃಹ ಇಲಾಖೆಯ ವೈಫಲ್ಯ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ಮೊನ್ನೆ ದೊಡ್ಡ ಮೆರವಣಿಗೆ ನಡೆದರೂ ಎಸ್‌ಪಿ ಇರಲಿಲ್ಲ. ಮಹಿಳೆಯರ ರಕ್ಷಣೆಗಾಗಿ ಓರ್ವ ಕಾನ್ಸ್‌ಟೇಬಲ್ ಕೂಡ ಇರಲಿಲ್ಲ. ಕಲ್ಲು ಹಿಡಿದು ಮಸೀದಿ ಒಳಗೆ ಕೂರುತ್ತಾರೆ. ಮೆರವಣಿಗೆ ಬರುತ್ತಿದ್ದಂತೆ ಕಲ್ಲು ತೂರಾಟ ನಡೆಸುತ್ತಾರೆ ಎಂದರೆ ಇದೆಲ್ಲಾ ಪೊಲೀಸ್ ಇಲಾಖೆ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯವಲ್ಲದೇ ಬೇರೆ ಏನೂ ಇಲ್ಲ ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳು ನೆಮ್ಮದಿಯಾಗಿ ಹಬ್ಬ ಆಚರಣೆ ಮಾಡುವ ಸ್ಥಿತಿಯಿಲ್ಲ. ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುವ ವಾತಾವರಣ ನಮ್ಮ ರಾಜ್ಯದಲ್ಲಿ ಇಲ್ಲ. ನಮ್ಮ ಹಬ್ಬವನ್ನು ಆಚರಿಸಲು ಆತಂಕದ ವಾತಾವರಣವಿದೆ ಎಂದರೆ ಈ ಸರ್ಕಾರ ಎಷ್ಟರ ಮಟ್ಟಿಗೆ ಓಲೈಕೆ ರಾಜಕಾರಣದಲ್ಲಿ ಮುಳುಗಿದೆ ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದು ಕಿಡಿಕಾರಿದರು.
ಇನ್ನು ಸಿಎಂ ಸಿದ್ದರಾಮಯ್ಯನವರು ಶಾಂತಿ ಕದಡುವುದೇ ಬಿಜೆಪಿ ಉದ್ದೇಶ ಎಂದು ಹೇಳಿಕೆ ನೀಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ಇಂತಹ ಹೇಳಿಕೆ ನೀಡಿದರೆ ರಾಜ್ಯವನ್ನು ಭಗವಂತನೇ ಕಾಪಾಡಬೇಕು ಎಂದರು.





