ಮಂಡ್ಯ : ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಹೊಸಬೂದನೂರು ಬಳಿ ನಡೆದಿದೆ.
ತಾಲ್ಲೂಕಿನ ಕಟ್ಟೇದೊಡ್ಡಿ ಗ್ರಾಮದ ಮನೋಜ್‌ಗೌಡ (28) ಹಲ್ಲೆಗೊಳಗಾದವರು. ಅವರ ಮೇಲೆ ಅದೇ ಗ್ರಾಮದ ರಂಜನ್‌ಕುಮಾರ್, ಕೆ.ಜೆ.ಗಿರೀಶ್, ರವಿಕುಮಾರ್, ಪವನ್, ಹರೀಶ್, ಚಂದನ್, ಬೊಮ್ಮಲಿಂಗ, ಪುಟ್ಟಸ್ವಾಮಿ ಸೇರಿದಂತೆ ಇತರರು ಹಲ್ಲೆ ನಡೆಸಿದ್ದಾರೆ ಎಂದು ಮನೋಜ್‌ಗೌಡ ಅವರ ಪತ್ನಿ ಸುಶ್ಮಿತಾ ಅವರು ದೂರು ನೀಡಿದ್ದಾರೆ.
ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಮನೋಜ್‌ಗೌಡ ಮತ್ತು ಆರೋಪಿಗಳ ನಡುವೆ ಜಗಳವಾಗಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮನೋಜ್ ಗೌಡ ಅವರು ಗ್ರಾಮವನ್ನು ತೊರೆದಿದ್ದರು. ಅವರು ಭಾನುವಾರ ರಾತ್ರಿ ಹೊಸಬೂದನೂರು ಬಳಿಯ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೆ, ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದು ಗಾಯ ಗೊಳಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ತೆರಳಿ, ತನ್ನ ಪತಿಯನ್ನು ರಕ್ಷಿಸಲು ಹೋದ ನನ್ನ ಮೇಲೂ ಆರೋಪಿಗಳು ದಾಳಿ ಮಾಡಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಮನೋಜ್ ಅವರನ್ನು ತಕ್ಷಣ ಸ್ಥಳೀಯರ ನೆರವಿನಿಂದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುಶ್ಮಿತಾ ತಿಳಿಸಿದ್ದಾರೆ.
ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





