ಬೆಂಗಳೂರು : ನಿರಂತರ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯದಲ್ಲಿ (KRS reservoir) ನೀರಿನ ಮಟ್ಟ 121 ಅಡಿಗೂ ಹೆಚ್ಚಿದೆ. ಗರಿಷ್ಠ 124.80 ಅಡಿ ಸಾಮರ್ಥ್ಯವಿರುವ ಈ ಜಲಾಶಯಕ್ಕೆ ಒಳಹರಿವು 13,856 ಕ್ಯೂಸೆಕ್‌ನಷ್ಟು ಇದ್ದು ಸದ್ಯದಲ್ಲೇ ಭರ್ತಿಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಅಣೆಕಟ್ಟೆಯಿಂದ ಯಾವುದೇ ಕ್ಷಣದಲ್ಲಾದರೂ ನೀರು ಬಿಡುಗಡೆಯಾಗುವ ಮೂನ್ಸೂಚನೆ ಇದೆ.
ಕೊಡಗು, ಚಿಕ್ಕಮಗಳೂರು, ಕೇರಳ ಭಾಗದಲ್ಲಿ ಮುಂಗಾರು ಮಳೆ ವ್ಯಾಪಕ ಪ್ರಮಾಣದಲ್ಲಿ ಬೀಳುತ್ತಿದ್ದು, ಇದರಿಂದ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಅದೇ ರೀತಿ ಜಲಾಶಯದ ಒಳಹರಿವು ನಿರಂತರವಾಗಿ ಏರಿಕೆಯಾಗುತ್ತಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 94.57 ಅಡಿಯಷ್ಟು ಮಾತ್ರ ನೀರು ಸಂಗ್ರಹವಾಗಿತ್ತು. ಜೂನ್ ತಿಂಗಳಿನಲ್ಲೇ ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಗಳಿದ್ದು, ಕುಡಿಯುವ ನೀರು ಹಾಗೂ ರೈತರ ಬೆಳೆಗಳಿಗೆ ನೀರಿನ ಸಮಸ್ಯೆ ನಿವಾರಣೆಯಾದಂತಾಗಿದೆ. ಕಾವೇರಿ ಜಲಾನಯನ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಜಲಾಶಯಗಳಿಗೆ ಒಳಹರಿವು ನಿರಂತರವಾಗಿದೆ.
ಆಂದೋಲನ ಪತ್ರಿಕೆಯಲ್ಲಿ ಡಿ ಉಮಾಪತಿ ಅವರ ಅಂಕಣ ಓದಲು ಮಿಸ್ ಮಾಡಿಕೊಂಡ್ರಾ.. ಹಾಗಾದ್ರೆ ಇಲ್ಲಿ ಓದಿ
ಹಾರಂಗಿ ಜಲಾಶಯ ಶೇ.74, ಹೇಮಾವತಿ ಶೇ.83, ಕಬಿನಿ ಜಲಾಶಯ ಶೇ.81ರಷ್ಟು ಭರ್ತಿಯಾಗಿದ್ದು, ಒಟ್ಟಾರೆ ನಾಲ್ಕೂ ಜಲಾಶಯಗಳಲ್ಲಿ ಶೇ.84ರಷ್ಟು ನೀರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದುಪ್ಪಟ್ಟು ನೀರಿನ ಸಂಗ್ರಹವಿದೆ. ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ವರಾಹಿ, ಸೂಫ ಜಲಾಶಯಗಳಿಗೂ ಒಳಹರಿವು ಹೆಚ್ಚಾಗಿದೆ. ಈ ಮೂರು ಜಲಾಶಯಗಳಿಂದ 38 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಒಟ್ಟಾರೆ ಶೇ.31ರಷ್ಟು ಭರ್ತಿಯಾಗಿವೆ.





