ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ
ಕಿಕ್ಕೇರಿ : ಹೋಬಳಿಯ ಕಳ್ಳನಕೆರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಗ್ರಾಮಸ್ಥರು ಪರದಾಡುವ ಸ್ಥಿತಿ ಬಂದಿದೆ.
ಗ್ರಾಮದಲ್ಲಿರುವ ಪ್ರಮುಖ ರಸ್ತೆಗಳು ಜನಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದ್ದು, ಭತ್ತ ನಾಟಿ ಮಾಡುವ ಕೆಸರು ಗದ್ದೆಯಂತೆ ಮಾರ್ಪಟ್ಟಿವೆ. ಗ್ರಾಮದ ಮಹಿಳೆ ಮೈತ್ರಿ ಮಾತನಾಡಿ, ಗ್ರಾಮದಲ್ಲಿ ಪ್ರಮುಖ ರಸ್ತೆಗಳಿಲ್ಲ, ಮಕ್ಕಳನ್ನು ಶಾಲೆಗೆ ಕಳಿಸಲು ಬಹಳ ಸಮಸ್ಯೆಯಾಗಿದೆ. ಹಾಲು ಹಾಕಲು ಹೋಗುವಾಗ ಬಿದ್ದು ಕೈಕಾಲು ನೋವು ಮಾಡಿಕೊಂಡಿದ್ದೇವೆ. ಸೂಕ್ತ ಚರಂಡಿ ವ್ಯವಸ್ಥೆ ಮಾಡಿ, ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿದರು.
ಮತ ಕೇಳಲು ಬರುವ ಜನ ಪ್ರತಿನಿಧಿಗಳು ಮಾತ್ರ ಸಮಸ್ಯೆ ಪರಿಹರಿಸುತ್ತೇವೆ ಎಂದು ಭರವಸೆ ನೀಡಿ ಹೋದವರು ಒಬ್ಬರೂ ಬಂದಿಲ್ಲ. ಕಿಕ್ಕೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಂದು ಸಮಸ್ಯೆ ಪರಿಹರಿಸದಿದ್ದರೆ ಗ್ರಾಮ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಮುಖಂಡ ಕುಮಾರ್ ಮಾತನಾಡಿ, ರಾಜಕಾರಣಿಗಳು ಸಮಸ್ಯೆ ಪರಿಹರಿಸದಿದ್ದರೆ ನಮ್ಮೂರಿನ ಮತದಾನವನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಪಂಚಾಯಿತಿ ಗಮನಕ್ಕೆ ತಂದರು.
ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಜನ ಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಿವೃತ್ತ ಶಿಕ್ಷಕ ಕೆ.ಪಿ.ಗಂಗಾಧರ್, ಮುಖಂಡರಾದ ಅಂದಾನಿಗೌಡ, ಸತೀಶ್, ಕೆ.ಎಚ್. ಸುರೇಶ್, ಗ್ರಾಪಂ ಮಾಜಿ ಸದಸ್ಯ ಕೆ.ಪಿ.ಪುಟ್ಟರಾಜು, ಕೆ.ಸುರೇಶ್, ಕೆ.ಆರ್.ಕುಮಾರ್, ನಾಗೇಂದ್ರ, ಕೆ.ಎಂ. ಕುಮಾರ್, ಲೋಹಿತ್, ಕೆ.ವಿ.ಅಶೋಕ್, ಕೆ.ಬಿ.ನಿಂಗರಾಜು, ಉಮೇಶ್, ಲೋಕೇಶ್, ಸುನಿತಾ, ರಾಮಕೃಷ್ಣ,ಶ್ವೇತಾ, ನಳಿನಿ, ಚಂದ್ರಮ್ಮ, ಇಂದ್ರಮ್ಮ, ಕುಮಾರಿ, ನಾರಾಯಣ, ಸತೀಶ್, ರಾಮಕೃಷ್ಣ, ಪದ್ಮರಾಜು ಉಪಸ್ತಿತರಿದ್ದರು





