ಮಂಡ್ಯ: ಕನ್ನಡಿಗರ ಮೇಲೆ ಮರಾಠಿ ಪುಂಡರ ಹಲ್ಲೆ ಖಂಡಿಸಿ ಇಂದು ಹಲವಾರು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಈ ಹಿನ್ನೆಲೆಯಲ್ಲಿ ಸಕ್ಕರೆ ನಾಡು ಮಂಡ್ಯದಲ್ಲಿ ಕರ್ನಾಟಕ ಬಂದ್‌ಗೆ ಅಲ್ಲಲ್ಲಿ ಬೆಂಬಲ ವ್ಯಕ್ತವಾಗಿದ್ದು, ಮಂಡ್ಯದ ಆರ್‌ಪಿ ರಸ್ತೆಯಲ್ಲಿ ಅಂಗಡಿಗಳನ್ನ ಬಂದ್ ಮಾಡಿ ಮಾಲೀಕರು ಕೂಡ ಪ್ರತಿಭಟನೆ ನಡೆಸಿದರು. ಮತ್ತೊಂದು ಕಡೆ ಮಂಡ್ಯದ ಸಂಜಯ ಸರ್ಕಲ್‌ನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮುಂದುವರಿದಿದ್ದು, ಮರಾಠಿಗರ ವಿರುದ್ಧ ಆಕ್ರೋಶದ ಕೂಗು ಕೇಳಿಬರುತ್ತಿದೆ.
ಇನ್ನು ಬಂದ್‌ಗೆ ಕೆಎಸ್‌ಆರ್‌ಟಿಸಿ ನೌಕರರು ಕೂಡ ಸಾಥ್ ನೀಡಿದ್ದು, ರಸ್ತೆಯಲ್ಲೇ ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಸಂಜಯ ವೃತ್ತದಲ್ಲಿ ಹಳೇ ಬೆಂಗಳೂರು-ಮೈಸೂರು ಹೆದ್ದಾರಿ ತಡೆದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲೇ ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕರು ಪ್ರತಿಭಟನೆಯಲ್ಲಿ ಭಾಗಿಯಾದರು. ನಮ್ಮ ಪರವಾಗಿ ಸಂಘಟನೆಗಳು ಬಂದ್ ಮಾಡ್ತಾ ಇವೆ. ಮಹಾರಾಷ್ಟ್ರ ಕಡೆ ಹೋದಾಗ ನಮ್ಮ ಮೇಲೂ ಹಲ್ಲೆ ಆಗಬಹುದು. ಮಹಾರಾಷ್ಟ್ರ ಪೊಲೀಸರು ಅವರಿಗೆ ಸಪೋರ್ಟ್ ಆಗಿ ಇದ್ದಾರೆ. ನಮ್ಮ ಮೇಲೆ ಹಲ್ಲೆ ಮಾಡಿರುವವರಿಗೆ ನಾವು ನುಗ್ಗಿ ಹೊಡೆಯಬೇಕು. ನಮ್ಮ ಪರ ಹೋರಾಟ ಮಾಡುತ್ತಿರುವವರಿಗೆ ಧನ್ಯವಾದಗಳು ಎಂದು ನಿರ್ವಾಹಕರು ಹಾಗೂ ಚಾಲಕರು ಮರಾಠಿಗ ಪುಂಡರ ವಿರುದ್ಧ ಕಿಡಿಕಾರಿದರು.
ಇನ್ನು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕನ್ನಡ ಪರ, ರೈತ ಪರ ಹೋರಾಟಗಾರು ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿದರು. ಸಂಜಯ ವೃತ್ತದಿಂದ, ಹೊಳಲು ವೃತ್ತ, ಪೇಟೆ ಬೀದಿ, ವಿವಿ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿ ಬಂದ್‌ಗೆ ಬೆಂಬಲ ಸೂಚಿಸಿದರು.