ಮಂಡ್ಯ: ಜಿಲ್ಲೆಯ ಮದ್ದೂರಿನಲ್ಲಿಂದು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕಳೆದ ಭಾನುವಾರ ಎರಡು ದಿನಗಳ ಹಿಂದೆಯಷ್ಟೇ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಮದ್ದೂರು ಉದ್ವಿಗ್ನಗೊಂಡಿದೆ.
ಈ ಬೆನ್ನಲ್ಲೇ ಇಂದಿನ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಪೊಲೀಸರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
28 ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, 3 ಕಿ.ಮೀವರೆಗೆ ಮೆರವಣಿಗೆ ಸಾಗಲಿದೆ. ನಗರದ ಐಬಿ ವೃತ್ತದಿಂದ ಗಣೇಶ ಮೂರ್ತಿಗಳ ಮೆರವಣಿಗೆ ಪ್ರಾರಂಭವಾಗಲಿದ್ದು, ಪೇಟೆ ಬೀದಿ, ಕೊಲ್ಲಿ ಸರ್ಕಲ್ ಮಾರ್ಗವಾಗಿ ಸಾಗಲಿರುವ ಮೆರವಣಿಗೆ ಶಿಂಷಾ ನದಿಯಲ್ಲಿ ಮುಕ್ತಾಯಗೊಳ್ಳಲಿದೆ. ಬಳಿಕ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ.
ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಬಿಜೆಪಿ ನಾಯಕರಾದ ವಿಜಯೇಂದ್ರ, ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮದ್ದೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದ್ದು, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ನೇತೃತ್ವದಲಲಿ ಭದ್ರತೆ ಒದಗಿಸಲಾಗಿದೆ.





